ADVERTISEMENT

ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 4:08 IST
Last Updated 2 ಏಪ್ರಿಲ್ 2013, 4:08 IST

ಬಂಗಾರಪೇಟೆ: ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಆಯಿಷಾ ಪರ್ವೀನ್ ಚುನಾವಣಾಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜ ಘಾತಕ ಚಟುವಟಿಕೆ, ನೀತಿ ಸಂಹಿತೆ ಉಲ್ಲಂಘನೆ ತಡೆಗಟ್ಟಲು ಕ್ಷೇತ್ರದಲ್ಲಿ 6 ವಿವಿಧ ತಂಡಗಳನ್ನು ರಚಿಸಲಾಗಿದೆ. ತಾಲ್ಲೂಕಿನ ಕನುಮನಹಳ್ಳಿ, ಬೂದಿಕೋಟೆ, ಬಂಗಾರಪೇಟೆ ಎಪಿಎಂಸಿ ಬಳಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಅಭ್ಯರ್ಥಿಗಳು ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಎಲ್ಲರ ಮೇಲೆ ನಿಗಾ ಇಡಲಾಗುವುದು ಎಂದರು.

ಬಂಗಾರಪೇಟೆ ತಹಶೀಲ್ದಾರ್ ನಾಗರಾಜ್ ಮಾತನಾಡಿ, ಕಸಬಾ, ಕಾಮಸಮುದ್ರ, ಹುತ್ತೂರು ಹೋಬಳಿಗೆ ಫ್ಲೈಯಿಂಗ್ ಸ್ಕ್ವಾಡ್ ವ್ಯವಸ್ಥೆಗೊಳಿಸಲಾಗಿದೆ. ಜತೆಗೆ ವೆಚ್ಚ ನಿಯಂತ್ರಣ ಸಮಿತಿ (94485112299), ವೀಡಿಯೋ ಸರ್ವೆಲೆನ್ಸ್ ಸಮಿತಿ (7760089196), ವೀಡಿಯೋ ವೀವಿಂಗ್ ಸಮಿತಿ (9481814240), ಲೆಕ್ಕ ನಿರ್ವಹಣೆ (9448962497) ಸಮಿತಿ ಮೀಡಿಯಾ ಸರ್ಟಿಫಿಕೇಶನ್ ಅಂಡ್ ಮಾನಿಟರಿಂಗ್ (9900611879) ಸಮಿತಿಗಳನ್ನು ರಚಿಸಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಸಾರ್ವಜನಿಕರು ಕೂಡಲೆ ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ, ಮಾಹಿತಿ ನೀಡಬೇಕೆಂದು ಕೋರಿದರು.

ವಿಧಾನ ಸಭೆ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ರೂ 16 ಲಕ್ಷ ಮಿತಿ ಇದೆ ಎಂದು ಹೇಳಿದರು. ತಾ.ಪಂ. ಕಾರ್ಯ ನಿರ್ವಣಾಧಿಕಾರಿ ಸಿ.ಶ್ರೀನಿವಾಸ್, ಬಿಇಒ ಕೆ.ಜಯರಾಜ್, ಪುರಸಭೆ ಮುಖ್ಯಾಧಿಕಾರಿ ಜಹೀರ್ ಅಬ್ಬಾಸ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.