ADVERTISEMENT

ರೈತರು, ದಲಿತರು ಒಂದಾದರೆ ಅಧಿಕಾರ

ಸಭೆಯಲ್ಲಿ ತಾಲ್ಲೂಕು ಬಿಎಸ್‌ಪಿ ಅಧ್ಯಕ್ಷ ಎಂ.ಜಿ.ಜಯಪ್ರಕಾಶ್‌ ಮನವಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 11:43 IST
Last Updated 22 ಮಾರ್ಚ್ 2018, 11:43 IST

ಶ್ರೀನಿವಾಸಪುರ: ದೇಶದ ಅಭಿವೃದ್ಧಿ ಬಗ್ಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಕಂಡಿದ್ದ ಕನಸು ನನಸಾಗಲು ಕೃಷಿಕರು ಹಾಗೂ ದಲಿತ ಸಮುದಾಯ ಒಂದಾಗಬೇಕು ಎಂದು ತಾಲ್ಲೂಕು ಬಿಎಸ್‌ಪಿ ಅಧ್ಯಕ್ಷ ಎಂ.ಜಿ.ಜಯಪ್ರಕಾಶ್‌ ಮನವಿ ಮಾಡಿದರು.

ಪಟ್ಟಣದ ಬಿಎಸ್‌ಪಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಣಿಸಲು ಜೆಡಿಎಸ್‌, ಬಿಎಸ್‌ಪಿ ಒಂದಾಗಿವೆ. ರೈತ ಹಾಗೂ ದಲಿತ ಸಮುದಾಯ ಒಂದಾದರೆ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಸುಲಭವಾಗುತ್ತದೆ ಎಂದು ಹೇಳಿದರು.

ADVERTISEMENT

ಮಾ.24 ರಂದು ಪಟ್ಟಣದಲ್ಲಿ ಬಿಎಸ್‌ಪಿಯಿಂದ ಬಿಎಸ್‌ಪಿ ಚಿನ್ಹೆಯಾದ ಆನೆ ಪ್ರತಿಕೃತಿ ಮೆರವಣಿಗೆ ಏರ್ಪಡಿಸಲಾಗಿದೆ. ಈ ಮೆರವಣಿಗೆ ಕೋಲಾರ ರಸ್ತೆಯಲ್ಲಿ ರೋಜೇನಹಲ್ಲಿ ಕ್ರಾಸ್‌, ಹೋಳೂರು, ಲಕ್ಷ್ಮೀಸಾಗರ, ಯಲ್ದೂರು, ಸೋಮಿಯಾಜಲಹಳ್ಳಿ ಮೂಲಕ ಮಾ.25 ರಂದು ಶ್ರೀನಿವಾಸಪುರ ತಲುಪುವುದು ಎಂದು ತಿಳಿಸಿದರು.

ಅಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಂ ಅವರ 84ನೇ ಜನ್ಮದಿನ ಆಚರಿಸಲಾಗುವುದು. ಜತೆಗೆ ಜೆಡಿಎಸ್ ಹಾಗೂ ಬಿಎಸ್‌ಪಿ ಮಹಾ ಮೈತ್ರಿ ಸಮಾವೇಶ ಏರ್ಪಡಿಸಲಾಗಿದೆ. ಬಿಎಸ್‌ಪಿ ನೂತನ ಕಚೇರಿ ಸಹ ಉದ್ಘಾಟಿಸಲಾಗುವುದು ಎಂದು ಹೇಳಿದರು.

ಬಿಎಸ್‌ಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮಂಜಲನಗರ ಚಂದ್ರಪ್ಪ, ಖಜಾಂಚಿ ಜಿ.ಅಜೇಯ್‌ ಪ್ರಸಾದ್‌ ಮತ್ತಿತರರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.