ADVERTISEMENT

ಲಸಿಕೆ ಕುರಿತು ಜಾಗೃತಿ ಮೂಡಿಸಿ: ಡಿಸಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 7:50 IST
Last Updated 18 ಜನವರಿ 2011, 7:50 IST

ಕೋಲಾರ: ಪೋಲಿಯೊ ಲಸಿಕೆ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ ಸೂಚನೆ ನೀಡಿದರು.ಜ. 23 ರಂದು ಮೊದಲನೇ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಸೋಮವಾರ ನಗರದ ತಮ್ಮ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.

ಒಂದು ಹನಿ ಪೋಲಿಯೊ ಲಸಿಕೆ ಹಾಕಿಸಿ ದೇಶವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿಸುವ ಕರೆಯೊಂದಿಗೆ ಕಳೆದ 15 ವರ್ಷಗಳಿಂದಲೂ ದೇಶದಾದ್ಯಂತ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ವರ್ಷವೂ ಈ ಲಸಿಕೆ ಏಕೆ ಹಾಕಿಸಬೇಕು? ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಆಂದೋಲನ ಸಮರದ ರೀತಿ ನಡೆಯಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ನೀಡಬಾರದು. ಗೊಂದಲ ಸೃಷ್ಟಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು.  ಕಾರ್ಯಕ್ರಮ ಸಂಬಂಧ ವ್ಯಾಪಕ ಪ್ರಚಾರ ಮಾಡಬೇಕು. ಎಲ್ಲಾ ಇಲಾಖೆಗಳು ತೊಡಗಿಸಿಕೊಳಬೇಕು ಎಂದರು. 

ಕಾರ್ಯಕ್ರಮದ ಯಶಸ್ಸು ವಿಶೇಷವಾಗಿ ಆರೋಗ್ಯ ಇಲಾಖೆಯ ಕಾರ್ಯವೈಖರಿಯನ್ನು ಬಿಂಬಿಸುವಂತಾಗಬೇಕು. ಶಾಲಾ ಮಕ್ಕಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ತೊಡಗಿಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಬೇಕು ಎಂದರು.

ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಲಕ್ಷ್ಮೀನಾರಾಯಣ ಕಾರ್ಯಕ್ರಮದ ಮಾಹಿತಿ ನೀಡಿ, ಜಿಲ್ಲಾದ್ಯಂತ 757 ಬೂತ್‌ಗಳಿದ್ದು, ಲಸಿಕೆ ಹಾಕಲು 3028 ಮಂದಿ ಹಾಗೂ 151 ಮೇಲ್ವಿಚಾರಕರನ್ನು ನೇಮಿಸಲಾಗಿದೆ. 527 ಬೂತ್‌ಗಳು ಗ್ರಾಮಾಂತರ ಪ್ರದೇಶದಲ್ಲಿವೆ. ಅಲ್ಲಿ ಲಸಿಕೆ ಹಾಕಲು 2108 ಮಂದಿ ಹಾಗೂ 105 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು

ಪ್ರಸಕ್ತ ಸಾಲಿನ ಮೊದಲ ಸುತ್ತಿನಲ್ಲಿ 1,82,615 ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಉದ್ದೇಶವಿದೆ. ಜಿಲ್ಲೆಯಲ್ಲಿರುವ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುವ ವಲಸಿಗ ಕಾರ್ಮಿಕರ ಸುಮಾರು 2000 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದರು.

ತಾಲ್ಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.  ಪ್ರಚಾರ ಕೈಗೊಳ್ಳಲು ಭಿತ್ತಿ ಪತ್ರ, ಕರಪತ್ರ, ಬ್ಯಾನರ್ ಹಾಗೂ ಮತ್ತಿತರ ಪರಿಕರಗಳನ್ನು ವಿತರಿಸಲಾಗಿದೆ ಕಾರ್ಯಕ್ರಮದ ಮುನ್ನಾ ದಿನ ಜ.22ರಂದು ವಿವಿಧ ಭಾಗಗಳಲ್ಲಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಚ್.ಸಿ.ರಮೇಶ್, ಜಿ.ಪಂ. ಸಿಇಒ ಎನ್.ಶಾಂತಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಭಗವಾನ್‌ದಾಸ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ  ಸಂಘಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.