ADVERTISEMENT

ವರಿಷ್ಠರಿಗೆ ಕಗ್ಗಂಟಾದ ಅಭ್ಯರ್ಥಿ ಆಯ್ಕೆ

ಜೆ.ಆರ್.ಗಿರೀಶ್
Published 26 ನವೆಂಬರ್ 2017, 7:15 IST
Last Updated 26 ನವೆಂಬರ್ 2017, 7:15 IST
ಕೆ.ಶ್ರೀನಿವಾಸಗೌಡ
ಕೆ.ಶ್ರೀನಿವಾಸಗೌಡ   

ಕೋಲಾರ: ರಾಜ್ಯದಲ್ಲಿ ಕುಮಾರಪರ್ವ ಯಾತ್ರೆ ಮೂಲಕ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಜೆಡಿಎಸ್‌ ವರಿಷ್ಠರಿಗೆ ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯು ಕಗ್ಗಂಟಾಗಿದೆ.

ಒಂದು ಕಾಲಕ್ಕೆ ಕ್ಷೇತ್ರವು ಜೆಡಿಎಸ್‌ನ ಭದ್ರಕೋಟೆಯಾಗಿತ್ತು. ಆದರೆ, ಹಿಂದಿನ ಎರಡು ವಿಧಾನಸಭಾ ಚುನಾವಣೆಗಳು ಕ್ಷೇತ್ರದ ರಾಜಕೀಯ ಚಿತ್ರಣವನ್ನೇ ಬದಲಿಸಿವೆ. ಸತತ ಎರಡು ಬಾರಿ ಗೆಲುವು ಸಾಧಿಸಿರುವ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ ಹ್ಯಾಟ್ರಿಕ್‌ ಜಯದ ಕನಸು ಕಾಣುತ್ತಿದ್ದಾರೆ.

ಆಂತರಿಕ ಕಲಹ, ಮುಖಂಡರ ನಡುವಿನ ಮುನಿಸು, ಭಿನ್ನಮತೀಯ ಚಟುವಟಿಕೆಗಳಿಂದ ಬಸವಳಿದಿರುವ ಜೆಡಿಎಸ್‌ ಪಾಳಯವು ಕ್ಷೇತ್ರದಲ್ಲಿ ಆದಿಪತ್ಯ ಪುನರ್‌ ಸ್ಥಾಪಿಸಲು ಮೈಕೊಡವಿ ನಿಂತಿದೆ. ಆದರೆ, ಅಭ್ಯರ್ಥಿ ಆಯ್ಕೆ ವಿಷಯವಾಗಿ ಆರಂಭದಲ್ಲೇ ಭಿನ್ನಮತ ಸ್ಫೋಟಗೊಂಡಿದೆ.

ADVERTISEMENT

ಹಿಂದಿನ ಎರಡು ಚುನಾವಣೆಗಳಲ್ಲಿ ಪಕ್ಷದಿಂದ ಕಣಕ್ಕಿಳಿದು ಮುಗ್ಗರಿಸಿರುವ ಮಾಜಿ ಸಚಿವ ಕೆ.ಶ್ರೀನಿವಾಸಗೌಡರು ಈ ಬಾರಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಅದೇ ಸಮುದಾಯಕ್ಕೆ ಸೇರಿದ ಶ್ರೀನಿವಾಸಗೌಡರನ್ನು ಅಖಾಡಕ್ಕಿಳಿಸಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಒಲವು ತೋರಿದ್ದಾರೆ.

ಅವಿಭಜಿತ ಕೋಲಾರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸಿ.ಆರ್‌.ಮನೋಹರ್‌ ಅವರನ್ನು ಕಣಕ್ಕಿಳಿಸಲು ಪಕ್ಷದ ಒಂದು ಗುಂಪು ತೆರೆಮರೆಯ ಪ್ರಯತ್ನ ನಡೆಸಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಮುಖಂಡರು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರ ಮೇಲೆ ಒತ್ತಡ ಹೇರಿದ್ದಾರೆ.

ದೇವೇಗೌಡರ ಚಿತ್ತ ಮನೋಹರ್‌ ಕಡೆಗಿದ್ದು, ಟಿಕೆಟ್‌ ಕೈ ತಪ್ಪಿದರೆ ಶ್ರೀನಿವಾಸಗೌಡರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಬಂಡಾಯದ ಅಪಾಯ ಅರಿತಿರುವ ದೊಡ್ಡ ಗೌಡರು ಶ್ರೀನಿವಾಸಗೌಡರನ್ನು ಮೂರ್ನಾಲ್ಕು ದಿನಗಳ ಹಿಂದೆ ಬೆಂಗಳೂರಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದು, ಟಿಕೆಟ್‌ನ ಭರವಸೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಮತ ವಿಭಜನೆ ಆತಂಕ: ಮನೋಹರ್ ಅವರಿಗೆ ಟಿಕೆಟ್‌ ಕೊಟ್ಟು ಶ್ರೀನಿವಾಸಗೌಡರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಪಕ್ಷದ ಮತಗಳು ವಿಭಜನೆಯಾಗುತ್ತವೆ ಎಂಬ ಆತಂಕ ವರಿಷ್ಠರನ್ನು ಕಾಡುತ್ತಿದೆ. ಚುನಾವಣಾ ಫಲಿತಾಂಶದ ದಿಕ್ಕನ್ನೇ ಬದಲಿಸುವ ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ವರಿಷ್ಠರು ಮನೋಹರ್‌ ಬಣದ ಮನವೊಲಿಸಿ ಶ್ರೀನಿವಾಸ್‌ಗೌಡರನ್ನೇ ಕಣಕ್ಕಿಳಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಪಕ್ಷದ ಕಚೇರಿ ಉದ್ಘಾಟನೆಗಾಗಿ ಭಾನುವಾರ (ನ.26) ಕ್ಷೇತ್ರಕ್ಕೆ ಬರುತ್ತಿರುವ ದೇವೇಗೌಡರು ಭಿನ್ನಮತದ ಗಾಯಕ್ಕೆ ಮುಲಾಮು ಹಚ್ಚುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.