ADVERTISEMENT

ವಿಚಾರದ ಹತ್ಯೆಗೆ ಗೌರಿ ಬಲಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 10:50 IST
Last Updated 12 ಅಕ್ಟೋಬರ್ 2017, 10:50 IST

ಮಾಲೂರು: ‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯು ಬರಿ ವ್ಯಕ್ತಿಯ ಹತ್ಯೆಯಲ್ಲ, ಅದು ವಿಚಾರದ ಹತ್ಯೆ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ಗೌರಿ ಹತ್ಯೆ ವಿರೋಧಿ ಹೋರಾಟ ಸಮಿತಿಯು ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಜಾಥಾ ಮತ್ತು ಸಮಾವೇಶದಲ್ಲಿ ಮಾತನಾಡಿ, ‘ಬಹುಮುಖಿ ವ್ಯಕ್ತಿತ್ವದ ಕನ್ನಡದ ಮನಸ್ಸುಗಳು ಹಿಂದಿನಿಂದಲೂ ವೈವಿಧ್ಯಮಯ ಸಂಸ್ಕೃತಿ, ಭಾಷೆಯೊಂದಿಗೆ, ಸಹಬಾಳ್ವೆ ಮತ್ತು ವೈಚಾರಿಕತೆಗೆ ಹೆಚ್ಚಿನ ಮಹತ್ವ ನೀಡಿವೆ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಮೂಲಭೂತವಾದದಿಂದ ಕನ್ನಡದ ಮನಸ್ಸುಗಳು ತೊಂದರೆ ಅನುಭವಿಸುತ್ತಿವೆ. ಸಮಾಜ ಕರಾಳ ಸನ್ನಿವೇಶ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಮುದಾಯದ ಮನಸ್ಸುಗಳು ಒಗ್ಗೂಡಿ ವಿವೇಕ ಮೆರೆಯಬೇಕು’ ಎಂದು ಕರೆ ನೀಡಿದರು.

ADVERTISEMENT

‘ಜೀವ ಪರವಾದ ನಿಲುವು ಎದುರಿಸಲಾಗದ ಶಕ್ತಿಗಳು ಬಂದೂಕಿನ ಮೊರೆ ಹೋಗಿರುವುದು ಹೇಡಿತನ. ಅವರಿಗೆ ಸೋಲಿನ ಲಕ್ಷಣ ಕಾಣಿಸುತ್ತಿದೆ. ತಲೆಗೆ ಗುಂಡಿಟ್ಟರೆ ವಿಚಾರವನ್ನು, ಎದೆಗೆ ಗುಂಡಿಟ್ಟರೆ ಹೃದಯವಂತಿಕೆಯನ್ನು ಕೊಲ್ಲಬಹುದು ಎಂದು ಯೋಚಿಸಿದ್ದರೆ ಅದು ಮುರ್ಖತನದ ಪರಮಾವಧಿ’ ಎಂದು ಕಿಡಿಕಾರಿದರು.

ಪಿ.ಲಂಕೇಶ್ ಅವರೊಂದಿಗೆ ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವ ಹಂಚಿಕೊಂಡರು. ನಟ ಚೇತನ್, ವಕೀಲ ಅನಂತನಾಯಕ್, ಜಾನಪದ ಅಕಾಡಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಸಮಿತಿ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ.ಮುನಿಯಪ್ಪ, ಪುರಸಭೆ ಸದಸ್ಯರಾದ ಮುರಳಿಧರ್, ಎ.ಅಶ್ವತ್ಥರೆಡ್ಡಿ, ನಾರಾಯಣಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.