ADVERTISEMENT

ವೇತನ, ಶಿಕ್ಷಕರ ಹುದ್ದೆ ಭರ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 5:01 IST
Last Updated 7 ಮಾರ್ಚ್ 2014, 5:01 IST

ಕೋಲಾರ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಕೋರಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪ್ರಮುಖರು ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರವು ತನ್ನ ನೌಕರರಿಗೆ 7ನೇ ವೇತನ ಆಯೋಗವನ್ನು ರಚಿಸಿದ್ದು ಅವರಿಗೆ ಶೇ.­100 ರಷ್ಟು ತುಟ್ಟಿಭತ್ಯೆ ದೊರೆಯಲಿದೆ. ಅದರಲ್ಲಿ ಶೇ.50ರಷ್ಟನ್ನು ಮೂಲ ವೇತನಕ್ಕೆ ಸೇರಿಸಬೇಕೆಂದು ಕೇಂದ್ರ ಸರ್ಕಾರಿ ನೌಕರರು ಇತ್ತೀಚೆಗೆ ಮುಷ್ಕರ ಮಾಡಿದ ಪರಿಣಾಮ ಕೇಂದ್ರ ಸರ್ಕಾರವು 50 ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ವಿಲೀನ ಮಾಡಲು ತೀರ್ಮಾನಿಸಿದೆ. ಅದೇ ರೀತಿಯ ಸೌಲಭ್ಯಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡಬೇಕು ಎಂದು ಮುಖಂಡರು ಆಗ್ರಹಿಸಿದರು.

ನೂತನ ಪಿಂಚಣೆ ನೀತಿಯಾದ ರಾಷ್ಟ್ರೀಯ ನಿವೃತ್ತಿ ಕಾಯ್ದೆ 2013 ಅನ್ನು ರದ್ದುಪಡಿಸ­ಬೇಕು, ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರದ ಮಾದರಿ­ಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ನೀಡಬೇಕು, ಕೇಂದ್ರದ ಮಾದರಿಯಲ್ಲಿ ಮನೆಬಾಡಿಗೆ ಭತ್ಯೆ­ಯನ್ನು ಎಲ್ಲಾ ಜಿಲ್ಲಾ ಮತ್ತು ತಾಲೂಕು, ಹೋಬಳಿ ಮಟ್ಟದಲ್ಲಿ ಪರಿಷ್ಕರಿಸಬೇಕು ಎಂದು ಕೋರಿದರು.

ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲೆಗಳಲ್ಲಿ ಖಾಲಿ­ಯಿರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು, ಕರ್ನಾಟಕ ಅತ್ಯವಶ್ಯಕ ಸೇವೆ­ಗಳ ನಿರ್ವಹಣಾ ವಿಧೇಯಕ 2013 ಅನ್ನು ಅನು­ಷ್ಠಾನ­ಗೊಳಿಸಬಾರದು. ಗುತ್ತಿಗೆ ಮತ್ತು ಹೊರ­ಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ಗುತ್ತಿಗೆ ಆಧಾರದ ಹಾಗೂ ದಿನನಗೂಲಿ ನೌಕರರ ಸೇವೆಯನ್ನು ಕಾಯಂ­ಗೊಳಿಸಬೇಕು.

ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಬೇಕು. ಅಡುಗೆ ಅನಿಲ ಪೂರೈಕೆಯ ನಿಟ್ಟಿನಲ್ಲಿ ವಿಧಿಸಿರುವ ಮಿತಿಯನ್ನು ತೆರವುಗೊಳಿಸಿ ಸಾರ್ವಜನಿಕರ ವಿತರಣಾ ವ್ಯವಸ್ಥೆ­ಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಪ್ರಮುಖರಾದ ಸಿ.ಆರ್.ಅಶೋಕ್, ಕೆ.ಮಹಮದ್ ಆಸೀಫ್ ಉಲ್ಲಾ, ಅಮರ ನಾರಾಯಣ, ಅಯಾಜ್ ಅಹ್ಮದ್, ಇಂದ್ರಯ್ಯ ಮತ್ತು ವೆಂಕಟರವಣಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.