ADVERTISEMENT

ಶಾಸಕರಿಗೆ ಜನರ ಘೇರಾವ್‌ ಸೋಲಿನ ಮುನ್ಸೂಚನೆ

ವರ್ತೂರು ಪ್ರಕಾಶ್‌ ವಿರುದ್ಧ ಶ್ರೀನಿವಾಸಗೌಡ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 12 ಮೇ 2018, 10:17 IST
Last Updated 12 ಮೇ 2018, 10:17 IST

ಕೋಲಾರ: ‘ಶಾಸಕ ವರ್ತೂರು ಪ್ರಕಾಶ್‌ರ ದುರಾಡಳಿತದಿಂದ ಆಕ್ರೋಶಗೊಂಡಿರುವ ಕ್ಷೇತ್ರದ ಜನ ಅವರು ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಘೇರಾವ್‌ ಹಾಕುತ್ತಿದ್ದಾರೆ. ಇದು ಶಾಸಕರ ಸೋಲಿನ ಮುನ್ಸೂಚನೆ’ ಎಂದು ಜೆಡಿಎಸ್ ಅಭ್ಯರ್ಥಿ ಕೆ.ಶ್ರೀನಿವಾಸಗೌಡ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ವಿವಿಧೆಡೆ ಗುರುವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ‘ನಾನು ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಜನ ಪ್ರೀತಿ ತೋರಿ ಗೌರವಿಸುತ್ತಿದ್ದಾರೆ. ಅಲ್ಲದೇ, ಚುನಾವಣೆಯಲ್ಲಿ ಬೆಂಬಲ ಕೊಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ಸಂತಸವಾಗಿದೆ’ ಎಂದು ಹೇಳಿದರು.

‘ನಗರದ ವಿವಿಧ ಬಡಾವಣೆಗಳು ಹಾಗೂ ಚಲುವನಹಳ್ಳಿಯಲ್ಲಿ ಮಹಿಳೆಯರು ವರ್ತೂರು ಪ್ರಕಾಶ್‌ರನ್ನು ಮಾರ್ಗ ಮಧ್ಯೆಯೇ ತಡೆದು ತಡೆದು ಪ್ರಚಾರ ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ. ಜನರ ಪ್ರಶ್ನೆಗೆ ಉತ್ತರಿಸಲಾಗದೆ ಶಾಸಕರು ಪ್ರಚಾರ ಅರ್ಧಕ್ಕೆ ಮೊಟಕುಕೊಳಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ವರ್ತೂರು ಪ್ರಕಾಶ್‌ ಮಹಿಳೆಗೆ ಸಹಾಯ ಮಾಡುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಸಂಬಂಧ ಸಂತ್ರಸ್ತ ಮಹಿಳೆಯು ಅಳಲು ತೋಡಿಕೊಂಡಿರುವ ವಿಡಿಯೋ ತುಣುಕು ಕ್ಷೇತ್ರದೆಲ್ಲೆಡೆ ಹರಿದಾಡುತ್ತಿದೆ. ಈ ಪ್ರಕರಣ ಬೆಳಕಿಗೆ ಬಂದ ಮೇಲೆ ಶಾಸಕರು ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಬಹುಶಃ ಅವರು ಕ್ಷೇತ್ರ ಬಿಟ್ಟು ಹೋಗಲು ಗಂಟು ಮೂಟೆ ಕಟ್ಟುತ್ತಿರಬಹುದು’ ಎಂದು ವ್ಯಂಗ್ಯವಾಡಿದರು.

‘ವರ್ತೂರು ಪ್ರಕಾಶ್‌ ಪರ ಪ್ರಚಾರ ನಡೆಸಲು ಜನ ಹೋಗುತ್ತಿಲ್ಲ. ಹೀಗಾಗಿ ಅವರು ಮಹಿಳೆಯರಿಗೆ ದಿನಕ್ಕೆ ₹ 200 ಕೊಟ್ಟು ಮನೆ ಮನೆಗೆ ಕರಪತ್ರ ಹಂಚಲು ಕಳುಹಿಸುತ್ತಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಯುವಕರಿಗೆ ಮದ್ಯದ ಬಾಟಲಿ ಕೊಟ್ಟು ಹಾಳು ಮಾಡಿದ್ದರು. ಈಗ ಶಾಸಕರಿಗೆ ಆ ಶಾಪ ತಟ್ಟಿದೆ’ ಎಂದು ಕುಟುಕಿದರು.

ಸಮಸ್ಯೆಯ ಗೂಡು: ‘ನಗರವು ಮೂಲಸೌಕರ್ಯ ಸಮಸ್ಯೆಯ ಗೂಡಾಗಿದೆ. ಕುಡಿಯುವ ನೀರು, ರಸ್ತೆ, ಒಳಚರಂಡಿ, ಬೀದಿ ದೀಪ, ನೈರ್ಮಲ್ಯ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. 10 ವರ್ಷ ಶಾಸಕರಾಗಿದ್ದ ವರ್ತೂರು ಪ್ರಕಾಶ್‌ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ’ ಎಂದು ದೂರಿದರು.

ನಗರದ ಟಮಕ. ಗಾಂಧಿನಗರ, ಕುರುಬರಪೇಟೆ, ಕೋಟೆ ಬಡಾವಣೆ, ಮೋಚಿಪಾಳ್ಯದಲ್ಲಿ ರೋಡ್‌ ಷೋ ಹಾಗೂ ತಾಲ್ಲೂಕಿನ ಕ್ಯಾಲನೂರು, ವೇಮಗಲ್‌, ವಕ್ಕಲೇರಿ, ನರಸಾಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಮು, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಇ.ಗೋಪಾಲ್, ತಾಲ್ಲೂಕು ಘಟಕದ ಅಧ್ಯಕ್ಷ ಬಾಬುಮೌನಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮುರಳಿರೆಡ್ಡಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.