ADVERTISEMENT

ಶಾಸಕ ಅಮರೇಶ್ ಶಿಕ್ಷೆ ಜಾರಿಗೆ ತಡೆ

ದಶಕದ ಹಿಂದಿನ ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 6:50 IST
Last Updated 10 ಏಪ್ರಿಲ್ 2013, 6:50 IST

ಕೋಲಾರ: ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿರುವ ಪ್ರಕರಣವೊಂದರಲ್ಲಿ ವಂಚನೆ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮುಳಬಾಗಲು ಶಾಸಕ ಅಮರೇಶ್ ಅವರಿಗೆ ಮುಳಬಾಗಲು ಪ್ರಧಾನ ಸಿವಿಲ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಮತ್ತು ರೂ 10 ಸಾವಿರ ದಂಡ ವಿಧಿಸಿ ಫೆ.28ರಂದು ನೀಡಿರುವ ತೀರ್ಪಿಗೆ ನಗರದ ಜಿಲ್ಲಾ ಮತ್ತು ಪ್ರಧಾನ ಸೆಷನ್ ನ್ಯಾಯಾಲಯ ಮಂಗಳವಾರ ತಡೆಯಾಜ್ಞೆ ನೀಡಿದೆ.

ಅಮರೇಶ್ ಶಾಸಕರಾಗಿದ್ದು, ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಉಳ್ಳವರಾಗಿರುವುದರಿಂದ, ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿ ಶಿಕ್ಷೆಯ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ತಡೆಯಾಜ್ಞೆ ಆದೇಶ ಹೊರಡಿಸಿತು ಎಂದು ಶಾಸಕರ ಪರ ವಕೀಲ ಕೋದಂಡಪ್ಪ ತಿಳಿಸಿದ್ದಾರೆ.

ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಅಭ್ಯರ್ಥಿ ಎಂಬ ವಿಷಯ ನಾಮಪತ್ರ ಸಲ್ಲಿಸುವ ಸಂದರ್ಭ ಅಮರೇಶ್ ಅವರಿಗೆ ತೊಡಕನ್ನುಂಟು ಮಾಡಬಹುದು ಎಂಬ ಕಾರಣದಿಂದ ಶಿಕ್ಷೆ ಆದೇಶಕ್ಕೆ ತಡೆ ಕೋರಿ ಸೋಮವಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ಮಂಗಳವಾರ ನಡೆದ ಸಂದರ್ಭ ಸುಪ್ರೀಂಕೋರ್ಟ್‌ನ ಕೆಲ ಆದೇಶಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಅವನ್ನೆಲ್ಲ ಪರಿಗಣಿಸಿದ ನ್ಯಾಯಾಲಯ ತಡೆಯಾಜ್ಞೆ ನೀಡಿತು ಎಂದು ಅವರು ಹೇಳಿದರು.

ವಿವರ
ಮುಳಬಾಗಲು ತಾಲ್ಲೂಕಿನ ಬೇವಹಳ್ಳಿಯ ವಾಸಿ ಎಂ.ಬಿ.ಲಿಂಗಾರಾಧ್ಯ ಎಂಬುವರಿಗೆ ಅದೇ ಗ್ರಾಮದ ಸರ್ವೇ ನಂಬರ್184ರಲ್ಲಿ 3 ಎಕರೆ 8ಗುಂಟೆ ಜಮೀನು ಬಸವ ಇನಾಂತಿಯಲ್ಲಿ 1983ರ ಫೆ.28ರಂದು ಮಂಜೂರಾಗಿತ್ತು.

ಆ ಜಮೀನನ್ನು ಸಿದ್ದನಹಳ್ಳಿ ಮುನಿಯಮ್ಮ ಎಂಬುವರಿಗೆ ಮಾರಾಟ ಮಾಡುವಲ್ಲಿ ಶಾಸಕ ಅಮರೇಶ್ 2002ರಲ್ಲಿ ತಾವು ಸೊನ್ನವಾಡಿ ಗ್ರಾಮ ಪಂಚಾಯತಿ ಸದಸ್ಯರಾಗಿದ್ದಾಗ ಚಂಗಲರಾಯಪ್ಪ ಮತ್ತು ಇತರೆ ಆರೋಪಿಗಳೊಂದಿಗೆ ಸೇರಿ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ನಕಲಿ ದಾಖಲೆಗಳೊಂದಿಗೆ  ಜಮೀನನ್ನು ಮಾರಾಟ  ಮಾಡಲಾಗಿದೆ. ಜಮೀನು ನೋಂದಣಿ ಸಮಯದಲ್ಲಿ ಅಮರೇಶ್ ಛಾಪ ಕಾಗದ ಸರಬರಾಜು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಲಿಂಗಾರಾಧ್ಯ 2002ರ ಜೂ.3ರಂದು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪೊಲೀಸರು ಐಪಿಸಿ ಸೆಕ್ಷನ್ 419, 420, 465, 471, 477(ಎ) ಮೇರೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಿ 2003ರಲ್ಲಿ ಮುಳಬಾಗಲು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮುಳಬಾಗಲಿನ ನ್ಯಾಯಾಲಯ ಫೆ.28ರಂದು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.