ADVERTISEMENT

ಶಿಕ್ಷಕಿ ಸಾವು: ಎಚ್1ಎನ್1 ಶಂಕೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 8:50 IST
Last Updated 7 ಏಪ್ರಿಲ್ 2012, 8:50 IST

ಮುಳಬಾಗಲು: ಅನಾರೋಗ್ಯದಿಂದ ಬಳಲುತ್ತಿದ್ದ ಶಿಕ್ಷಕಿಯೊಬ್ಬರು ಗುರುವಾರ ರಾತ್ರಿ ಮೃತಪಟ್ಟಿದ್ದು, ಅದಕ್ಕೆ ಎಚ್1ಎನ್1 ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ತಾಲ್ಲೂಕಿನ ಕಾಡುಕಚ್ಚನಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಶಿಕ್ಷಕಿ ಬಿ.ಕೆ.ಗಾಯತ್ರಿ (26) ಮೃತ ಮಹಿಳೆ. ಪಟ್ಟಣದ ಪಳ್ಳಿಗರಪಾಳ್ಯದ ವಾಸಿಯಾದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕಳೆದ ಮಾ. 26ರಂದು ದಾಖಲಿಸಲಾಗಿತ್ತು. ಸಾವಿಗೆ ಎಚ್1ಎನ್1 ಕಾರಣ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ವಿ.ಜಗನ್ನಾಥ್ ತಿಳಿಸಿದ್ದಾರೆ.

ಆದರೆ ಇದಕ್ಕೆ ವ್ಯತಿರಿಕ್ತವಾದ ಪ್ರತಿಕ್ರಿಯೆಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಪ್ಪಸ್ವಾಮಿ ನೀಡಿದ್ದಾರೆ. ರೋಗಿಯು ಎಚ್1ಎನ್1 ಲಕ್ಷಣದಿಂದ ಸಾವಿಗೀಡಾಗಿದ್ದಾರೆ ಎಂದು ಬೆಂಗಳೂರಿನ ನಿಮ್ಹಾನ್ಸ್ ವರದಿ ನೀಡಿದರೆ ಮಾತ್ರ ನಂಬಬಹುದು. ಇದುವರೆಗೆ ಅಂಥ ವರದಿ ನಮ್ಮನ್ನು ತಲುಪಿಲ್ಲ.
 
ಹೀಗಾಗಿ ಶಿಕ್ಷಕಿಯು ಎಚ್1ಎನ್1 ಶಂಕಿತ ಲಕ್ಷಣಗಳಿಂದ ಸಾವಿಗೀಡಾಗಿರಬಹುದು ಎಂದು ಊಹಿಸಬಹುದಷ್ಟೆ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಶಿಕ್ಷಕಿ ವಾಸಿಸುತ್ತಿದ್ದ ಸುತ್ತಮುತ್ತ ಪರಿಶೀಲನೆ ನಡೆಸಲಾಗಿದೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಔಷಧಿಯೂ ಲಭ್ಯವಿದೆ. ಜ್ವರ, ಕೆಮ್ಮು, ನೆಗಡಿ, ಗಂಟಲು ಕೆರೆತ, ಕೆಲವು ವೇಳೆ ಮೈಕೈ ನೋವು, ವಾಂತಿ-ಭೇದಿಯೂ ಕಾಣಿಸಿಕೊಳ್ಳುತ್ತದೆ. ಸಾಮಾನ್ಯ ಔಷಧಿಗಳಿಗೆ ಅದು ವಾಸಿಯಾಗದಿದ್ದರೆ ಅದು ಎಚ್1ಎನ್1 ಲಕ್ಷಣವಾಗಿರುತ್ತದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.