ADVERTISEMENT

ಸಚಿವರಿಂದ ಸಹಾಯಕ ನಿರ್ದೇಶಕ ತರಾಟೆಗೆ

ಕ್ರೀಡಾಪಟುಗಳಿಗೆ ಸೌಲಭ್ಯ ನೀಡದೆ ನಿರ್ಲಕ್ಷ್ಯ: ದೂರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 11:18 IST
Last Updated 2 ಆಗಸ್ಟ್ 2013, 11:18 IST

ಕೋಲಾರ: ವಿಶೇಷ ಘಟಕ ಯೋಜನೆ ಅಡಿಯಲ್ಲಿ ಪರಿಶಿಷ್ಟ ಸಮುದಾಯದವರಿಗೆ ಕ್ರೀಡಾ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳದಿರುವುದು, ಕ್ರೀಡಾಪಟುಗಳಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸದಿರುವುದು, ಜಿಲ್ಲಾ ಅಥ್ಲೆಟಿಕ್ ತರಬೇತುದಾರರಿಗೆ ಸಹಕಾರ ನೀಡದಿರುವುದು, ಯುವ ಪ್ರಶಸ್ತಿ ವಿತರಿಸದಿರುವುದು, ಕ್ರೀಡಾಂಗಣ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸದಿರುವುದೂ ಸೇರಿದಂತೆ ಹಲವು ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ಗುರುವಾರ ನಡೆಯಿತು.

ನಗರದ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆ ಉದ್ಘಾಟಿಸಿ, ಬಳಿಕ ಪಕ್ಕದ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ  ಭೇಟಿ ನೀಡಿದ ಸಂದರ್ಭದಲ್ಲಿ ಹಾಜರಿದ್ದ ಹಲವರು ಅಧಿಕಾರಿ ನಿರ್ಲಕ್ಷ್ಯ ಧೋರಣೆಯ ಕುರಿತು ಹಲವು ದೂರುಗಳನ್ನು ಹೇಳಿದರು.

ಯುವ ಸಬಲೀಕರಣಕ್ಕೆ ಬೇಕಾದ ಉತ್ಸಾಹ ಮತ್ತು ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬದ್ಧತೆಯುಳ್ಳ ಅಧಿಕಾರಿಯನ್ನು ನೇಮಿಸಿದರೆ ಮಾತ್ರ ಜಿಲ್ಲೆಯಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳು ಉಳಿಯುತ್ತಾರೆ. ಬದ್ಧತೆ ಇಲ್ಲದ ಅಧಿಕಾರಿಗಳಿಂದ ಅನಾನುಕೂಲವೇ ಹೆಚ್ಚಾಗುತ್ತಿದೆ ಎಂದು ದೂರಿದರು.

ಕ್ರೀಡಾಂಗಣ ಅಭಿವೃದ್ಧಿಗೆ ಪ್ರಸ್ತಾವನೆಯನ್ನು ಸಲ್ಲಿಸಿ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿ ಒಂದು ವರ್ಷವಾದರೂ ಪ್ರಸ್ತಾವನೆಯನ್ನೇ ಸಲ್ಲಿಸದಿರುವುದರಿಂದ ಕ್ರೀಡಾಂಗಣ ಕ್ರೀಡಾಸಕ್ತರಿಗೆ ಅನುಕೂಲಕರವಾಗದೇ ಉಳಿಯುವಂತಾಗಿದೆ. 2009ರಿಂದಲೂ ಜಿಲ್ಲಾ ಯುವ ಪ್ರಶಸ್ತಿಯನ್ನು ವಿತರಿಸುವ ಪ್ರಯತ್ನವನ್ನೇ ಮಾಡಿಲ್ಲ. ಪರಿಶಿಷ್ಟ ಸಮುದಾಯದ ವಿಶೇಷ ಘಟಕ ಯೋಜನೆಯ ಹಣವೂ ವಾಪಸು ಹೋಗಿದೆ ಎಂದು ಕ್ರೀಡಾಪಟುಗಳು ದೂರಿದರು.

ಯಾಕೆ ಪ್ರಸ್ತಾವನೆ ಸಲ್ಲಿಸಲಿಲ್ಲ? ನಿಮಗೆ ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲವೇ? ಎಂದು ಸಚಿವರು ಅಧಿಕಾರಿ ಬಿ.ರುದ್ರಪ್ಪ ಅವರನ್ನು ಕೇಳಿದರು. ಅದಕ್ಕೆ ಸ್ಪಷ್ಟ ಉತ್ತರ ನೀಡದ ಅಧಿಕಾರಿ, ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದಷ್ಟೇ ಹೇಳಿದರು. ವಿಶೇಷ ಘಟಕ ಯೋಜನೆ ಅಡಿ ಏಕೆ ಶಿಬಿರಗಳನ್ನುಏರ್ಪಡಿಸಲಿಲ್ಲ. ಬಂದ ಹಣವನ್ನು ಏನು ಮಾಡಿದಿರಿ? ಎಂಬ ಪ್ರಶ್ನೆಗೂ ಅಧಿಕಾರಿ, ಕೆಲವು ದಿನಗಳಲ್ಲಿ ಶಿಬಿರಗಳನ್ನು ನಡೆಸಲಾಗುವುದು ಎಂದರು.

ನಿರ್ಲಕ್ಷ್ಯ: ಶ್ರೀಲಂಕಾದಲ್ಲಿ ನಡೆಯುತ್ತಿರುವ 27ನೇ ಓಪನ್ ಚಾಂಪಿಯನ್‌ಶಿಪ್‌ಗೆ ತಾವು ತೆರಳಲಿದ್ದು, ಆ ಹಿನ್ನೆಲೆಯಲ್ಲಿ ಅಭ್ಯಾಸ ನಡೆಸಲು ಕ್ರೀಡಾ ಉಪಕರಣಗಳನ್ನು ನೀಡಬೇಕೆಂದು ಕೇಳಿದರೆ ಅಧಿಕಾರಿ ಸ್ಪಂದಿಸಲಿಲ್ಲ. ಉತ್ಸಾಹಿ ಕ್ರೀಡಾಪಟುಗಳಿಗೆ  ಎಂದು ಹಿರಿಯ ಕ್ರೀಡಾಪಟು ಗೌಸ್‌ಖಾನ್ ಸಚಿವರ ಮುಂದೆಯೇ ಅಸಮಾಧಾನ ವ್ಯಕ್ತಪಡಿಸಿದರು.

ಅಸಹಕಾರ: ಜಿಲ್ಲೆಯಲ್ಲಿ ಅಥ್ಲೆಟಿಕ್ ಕ್ಷೇತ್ರ 15 ವರ್ಷದಿಂದ ಶೋಚನೀಯ ಸ್ಥಿತಿಯಲ್ಲಿತ್ತು. ಒಂದೂವರೆ ವರ್ಷದ ಹಿಂದೆ ಇಲಾಖೆಗೆ ಬಂದ ಜಿಲ್ಲಾ ಅಥ್ಲೆಟಿಕ್ ತರಬೇತುದಾರ ಪಿ.ಎಲ್.ಶಂಕರಪ್ಪ ಅವರು ಕ್ರೀಡಾಪಟುಗಳಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಆದರೆ ಅವರಿಗೆ ಅಧಿಕಾರಿಯು ಸಹಕಾರ ನೀಡುತ್ತಿಲ್ಲ. ಕ್ರೀಡಾಪಟುಗಳಿಗೆ ಸೌಕರ್ಯವನ್ನೂ ಕಲ್ಪಿಸುತ್ತಿಲ್ಲ ಎಂದೂ ಆರೋಪಿಸಿದರು.

ಅಥ್ಲೆಟಿಕ್ಸ್‌ನಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವ ಬಡ, ಪ್ರತಿಭಾವಂತರಾದ ಐದಾರು ಕ್ರೀಡಾಪಟುಗಳು ವಕ್ಕಲೇರಿ, ಮುಳಬಾಗಲಿನಿಂದ ಪ್ರಯಾಣಿಸಿ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ಅಭ್ಯಾಸ ನಡೆಸುತ್ತಿದ್ದಾರೆ. ಅವರಿಗೆ ಕ್ರೀಡಾ ವಸತಿ ಶಾಲೆಯಲ್ಲಿ ಊಟ, ವಸತಿ ನೀಡುವ ಮನವಿಗೂ ಅಧಿಕಾರಿ ಸ್ಪಂದಿಸಿಲ್ಲ ಎಂದು ದೂರಿದರು.

ಉನ್ನತ ಅಧಿಕಾರಿಗಳು ಆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ ಎಂದು ರುದ್ರಪ್ಪ ಉತ್ತರಿಸಿದರು. ಅದಕ್ಕೆ ಪ್ರತಿಕ್ರಿಯಿಸಿ, ಜಿಲ್ಲೆಯ ಕ್ರೀರ್ತಿಯನ್ನು ಹೆಚ್ಚಿಸಲು ಕಷ್ಟಪಡುವ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲು ಕಾನೂನನ್ನು ಮುರಿಯಬೇಡಿ. ಆದರೆ ಸಾಧ್ಯವಾದಷ್ಟು ಬಗ್ಗಿಸಿ,  ಕ್ರೀಡಾಪಟುಗಳಿಗೆ ಉತ್ತೇಜನ ನೀಡಿ ಎಂದು ಸೂಚಿಸಿದರು.

ಪ್ರತಿಭಾವಂತ ಕ್ರೀಡಾಪಟುಗಳಿಗೆ ಕ್ರೀಡಾ ವಸತಿ ಶಾಲೆಯಲ್ಲಿ ಊಟ, ವಸತಿ ಸೌಲಭ್ಯ ಕಲ್ಪಿಸುವಂತೆ ಕೋರಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಸ್ಥಳದಲ್ಲಿದ್ದ ಜಿ.ಪಂ.ಅಧ್ಯಕ್ಷೆ ಚೌಡೇಶ್ವರಿ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆಯುಕ್ತರೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

14 ರಂದು ಸಭೆ: ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಯೂ ಸೇರಿದಂತೆ ಜಿಲ್ಲೆಯ ಕ್ರೀಡಾಕ್ಷೇತ್ರವನ್ನು ಸುಧಾರಿಸುವ ನಿಟ್ಟಿನಲ್ಲಿ ಆ.14ರಂದು ಸಭೆ ನಡೆಸಲಾಗುವುದು. ಆ ಹೊತ್ತಿಗೆ ಅಗತ್ಯ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಪರಿಶಿಷ್ಟ ಸಮುದಾಯದವರಿಗೆ ಕ್ರೀಡಾತರಬೇತಿ ಶಿಬಿರಗಳನ್ನು ಏರ್ಪಡಿಸಬೇಕು. ಅನುದಾನವನ್ನು ಕ್ರೀಡಾಪಟುಗಳ ಅನುಕೂಲಕ್ಕೆ ಬಳಸಬೇಕು ಎಂದು ಸಚಿವರು ಸೂಚಿಸಿದರು. ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಕೆ.ಜಯದೇವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.