ADVERTISEMENT

ಸಭೆ ಬಹಿಷ್ಕರಿಸಿದ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ

ಸಭೆಯ ಮಾಹಿತಿ ನೀಡದ ಅಧಿಕಾರಿಗಳು ವಿರುದ್ಧ ಗರಂ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 11:03 IST
Last Updated 16 ನವೆಂಬರ್ 2017, 11:03 IST
ಸಭೆ ಬಹಿಷ್ಕರಿಸಿದ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ
ಸಭೆ ಬಹಿಷ್ಕರಿಸಿದ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ   

ಕೋಲಾರ: ಪ್ರಗತಿ ಪರಿಶೀಲನೆ ಸಭೆ ಸಂಬಂಧ ತಮಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್ ಮಂಗಳವಾರ ಸಭೆ ಬಹಿಷ್ಕರಿಸಿ ಹೊರ ನಡೆದರು.

ಪೂರ್ವ ನಿಗದಿತ ಸಮಯದಂತೆ ನಗರದಲ್ಲಿ ಬೆಳಿಗ್ಗೆ 11ಕ್ಕೆ ಜಿ.ಪಂ ಅಧ್ಯಕ್ಷೆ ಗೀತಾ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಯಿತು. ತಡವಾಗಿ ಸಭೆಗೆ ಬಂದ ವೆಂಕಟೇಶ್‌, ‘ನನಗೆ ಸಭೆಯ ಸಂಗತಿಯೇ ಗೊತ್ತಿಲ್ಲ. ಪ್ರಗತಿ ಪರಿಶೀಲನೆ ಸಭೆ ಎಂದರೆ ನಾಲ್ಕೈದು ದಿನ ಮುಂಚಿತವಾಗಿ ಹೇಳಲು ಸಾಧ್ಯವಿಲ್ಲವೇ’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

‘ಜಿ.ಪಂ ಉಪಾಧ್ಯಕ್ಷೆ ಯಶೋದಾ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಪ್ಪ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಅವರಿಗೂ ಸಭೆಯ ಬಗ್ಗೆ ಮಾಹಿತಿ ಇಲ್ಲ. ಇದೇ ಕಾರಣಕ್ಕೆ ಅವರು ಸಭೆಗೆ ಬಂದಿಲ್ಲ. ನಾನು ಯಾವ ಕಾರಣಕ್ಕೆ ಸಭೆ ಬಹಿಷ್ಕರಿಸುತ್ತಿದ್ದೇನೆ ಎಂಬುದನ್ನು ತಿಳಿಸಲು ಸಭೆಗೆ ಬಂದಿದ್ದೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ನೆಪಕ್ಕೆ ಮಾತ್ರ ಸಭೆ ನಡೆಸುತ್ತಿದ್ದೀರಿ. ನಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ನಾವು ಯಾರನ್ನು ಕೇಳಬೇಕು. ಪ್ರತಿ ಬಾರಿ ಇದೇ ರೀತಿ ಆಗುತ್ತಿದೆ. ನಾಳೆ ಸಭೆ ಇದೆ ಎಂದು ಅಧಿಕಾರಿಗಳು ಹಿಂದಿನ ದಿನ ಕರೆ ಮಾಡುತ್ತಾರೆ. ನಮಗೆ ಬೆಲೆ ಇಲ್ಲವೇ, ಇಂತಹ ಸಭೆ ಯಾಕೆ ನಡೆಸಬೇಕು’ ಎಂದು ಕಿಡಿಕಾರಿದರು.

ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷೆ ಗೀತಾ, ‘ಅಧಿಕಾರಿಗಳು ನನಗೂ ಸೋಮವಾರ ಸಂಜೆ ಕರೆ ಮಾಡಿ ಸಭೆಯ ಸಂಗತಿ ತಿಳಿಸಿದರು. ನಾಲ್ಕೈದು ದಿನ ಮುಂಚಿತವಾಗಿ ಸಭೆಯ ವಿಷಯ ತಿಳಿಸಬೇಕೆಂಬ ಕನಿಷ್ಠ ಜ್ಞಾನ ಇಲ್ಲವೇ, ಜನಪ್ರತಿನಿಧಿಗಳ ವಿಚಾರದಲ್ಲೇ ಈ ರೀತಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಜನಸಾಮಾನ್ಯರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ’ ಎಂದು ಪ್ರಶ್ನಿಸಿದರು.

ಸಿಇಒ ತರಾಟೆ: ಆಗ ಮಧ್ಯ ಪ್ರವೇಶಿಸಿದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ‘ಸಭೆಯ ಸೂಚನಾ ಪತ್ರವನ್ನು ಒಂದು ವಾರ ಮುಂಚಿತವಾಗಿ ಸದಸ್ಯರಿಗೆ ಕಳುಹಿಸಬೇಕು. ಮುಂದೆ ಈ ಅಚಾತುರ್ಯ ನಡೆಯದಂತೆ ಎಚ್ಚರ ವಹಿಸಿ. ಎಂಟು ದಿವಸ ಮುಂಚಿತವಾಗಿ ಸಭೆಯ ನೋಟಿಸ್ ಕಳುಹಿಸಲು ಏನು ಸಮಸ್ಯೆ’ ಎಂದು ಯೋಜನಾ ಅಧಿಕಾರಿ ಮುನಿಯಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ಅದಕ್ಕೆ ಉತ್ತರಿಸಿದ ಮುನಿಯಪ್ಪ, ‘ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಈ ಪ್ರಮಾದವಾಗಿದೆ. ನಾನೊಬ್ಬನೇ ಎಲ್ಲಾ ಕೆಲಸ ಕಾರ್ಯ ನೋಡಿಕೊಳ್ಳಬೇಕು’ ಎಂದು ಹೇಳಿದರು.

ಇದರಿಂದ ಮತ್ತಷ್ಟು ಕೆಂಡಾಮಂಡಲರಾದ ಕಾವೇರಿ, ‘ಕರ್ತವ್ಯ ನಿರ್ಲಕ್ಷ್ಯ ತೋರಿ ಸಬೂಬು ಹೇಳಬೇಡಿ. ಸದಸ್ಯರಿಗೆ ಸಭೆಯ ಮಾಹಿತಿ ನೀಡುವುದು ನಿಮ್ಮ ಕರ್ತವ್ಯ’ ಎಂದು ತಾಕೀತು ಮಾಡಿದರು.

ವೈದ್ಯರ ಹುದ್ದೆ ಖಾಲಿ: ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಹಾಗೂ ಗುಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹುದ್ದೆಗಳು ಖಾಲಿ ಇವೆ. ಬೇರೆ ವೈದ್ಯರನ್ನು ನಿಯೋಜನೆ ಮಾಡುವಂತೆ ಸೂಚಿಸಲಾಗಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾಕೆ ಗಮನ ಹರಿಸಿಲ್ಲ ಎಂದು ಗೀತಾ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯಕುಮಾರ್, ಕುರುಡುಮಲೆ ಗ್ರಾಮದ ಆಸ್ಪತ್ರೆಗೆ ಈಗಾಗಲೇ ವೈದ್ಯರನ್ನು ನಿಯೋಜಿಸಲಾಗಿದೆ. ಗ್ರಾಮಸ್ಥರು ಆಸ್ಪತ್ರೆಯ ಸುತ್ತ ಕಾಂಪೌಂಡ್ ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಾಂಪೌಂಡ್‌ ನಿರ್ಮಿಸಬೇಕು ಎಂದರು.

ರಾಜ್ಯದೆಲ್ಲೆಡೆ ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಿ ಎಂದು ಗೀತಾ ಸೂಚಿಸಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಪ್ರತಿ ಕ್ಲಸ್ಟರ್ ಮಟ್ಟದಲ್ಲಿ ನೋಡಲ್‌ ಅಧಿಕಾರಿ ನೇಮಿಸಿ. ಪ್ರತಿ ವಾರ ಶಾಲೆಗಳಿಗೆ ಭೇಟಿ ನೀಡಿ ಫಲಿತಾಂಶದ ಬಗ್ಗೆ ಮಾಹಿತಿ ನೀಡಬೇಕು. ವಸತಿ ಶಾಲೆಗಳಲ್ಲಿ ರಾತ್ರಿಯೂ ಪ್ರಾಂಶುಪಾಲರು, ಶಿಕ್ಷಕರು ಇರಬೇಕು. ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆಯೊ ಅಥವಾ ಇಲ್ಲವೊ ಎಂಬ ಬಗ್ಗೆ ಪರಿಶೀಲಿಸಬೇಕು ಎಂದು ಸಿಇಒ ಕಾವೇರಿ ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿ ಶಾಲೆಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಇಲಾಖೆಯ ನಿರ್ದೇಶನದಂತೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಜತೆಗೆ ಗಣಿತ, ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯ ಕುರಿತು ಅನುಭವಿ ಶಿಕ್ಷಕರಿಂದ ತರಬೇತಿ ಕೊಡಿಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸ್ವಾಮಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.