ADVERTISEMENT

ಸರ್ಕಾರಿ ಜಮೀನು ತೆರವು: ಕರವೇ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2013, 6:49 IST
Last Updated 1 ಫೆಬ್ರುವರಿ 2013, 6:49 IST
ಬಂಗಾರಪೇಟೆ ತಾಲ್ಲೂಕಿನ ರಾಯಸಂದ್ರ ಗ್ರಾಮದ ವ್ಯಾಪ್ತಿಯಲ್ಲಿ ಒತ್ತುವರಿ ಆಗಿರುವ ಸರ್ಕಾರಿ ಜಮೀನು ತೆರವಿಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಶಾಸಕ ಎಂ.ನಾರಾಯಣ ಸ್ವಾಮಿ. ತಹಶೀಲ್ದಾರ್ ಎಸ್.ಎಂ.ಮಂಗಳಾ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ, ಪ್ರಧಾನ ಕಾರ್ಯದರ್ಶಿ ಚಿನ್ನಿ ವೆಂಕಟೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸಿ.ಗೋಪಾಲ್ ಇದ್ದಾರೆ.

ಬಂಗಾರಪೇಟೆ: ತಾಲ್ಲೂಕಿನ ರಾಯಸಂದ್ರ ಗ್ರಾಮದ ವ್ಯಾಪ್ತಿಯಲ್ಲಿ ಒತ್ತುವರಿ ಆಗಿರುವ ಸರ್ಕಾರಿ ಜಮೀನನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಕ್ಯಾಸಂಬಳ್ಳಿ ಹೋಬಳಿ ರಾಯಸಂದ್ರ ಗ್ರಾಮದ ಸರ್ವೆ ನಂ.854ರಲ್ಲಿ ಸರ್ಕಾರಿ ಖರಾಬು ತೋಪು ಮತ್ತು ದೇಗುಲಗಳಿದ್ದವು. ಅದರೆ ಗ್ರಾಮದ ಜಯರಾಮರೆಡ್ಡಿ ಎಂಬುವರು ಆ ಜಮೀನಿನಲ್ಲಿದ್ದ ದೇಗುಲ, ಮಂಟಪಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಜಮೀನು ಕಬಳಿಸಲು ಯತ್ನಿಸಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಈ ವಿಷಯದ ಬಗ್ಗೆ ಹಲ ಬಾರಿ ತಾಲ್ಲೂಕು ಆಡಳಿತದ ಗಮನಕ್ಕೆ ತರಲಾಗಿದೆ. ಆದರೂ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡಲಾಗಿದೆ. ತಕ್ಷಣ ಒತ್ತುವರಿ ತೆರವುಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ಮುಂದುವರಿದರೆ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಧಾವಿಸಿದ ಶಾಸಕ ಎಂ.ನಾರಾಯಣ ಸ್ವಾಮಿ, ಮುಂದಿನ ಸೋಮವಾರ ಸರ್ವೆ ಆರಂಭಿಸಿ, ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು

ಕರವೇ ಜಿಲ್ಲಾ ಅಧ್ಯಕ್ಷ ರಾಜ ಗೋಪಾಲಗೌಡ, ಪ್ರಧಾನ ಕಾರ್ಯದರ್ಶಿ ಚಿನ್ನಿ ವೆಂಕಟೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸಿ.ಗೋಪಾಲ್, ಕೆಜಿಎಫ್ ಘಟಕ ಸಂಘಟನಾ ಕಾರ್ಯದರ್ಶಿ ಆರ್.ಕೆ.ಸುಬ್ರಮಣಿ, ಸುಂದರ ಪಾಳ್ಯ ಘಟಕದ ಅಧ್ಯಕ್ಷ ಎಸ್.ಆರ್.ವೆಂಕಟರಾಮ್, ರಾಯಸಂದ್ರ ಘಟಕ ಅಧ್ಯಕ್ಷ ಆರ್.ಜಿ.ಶ್ರಿನಿವಾಸ್, ನಗರ ಘಟಕ ಅಧ್ಯಕ್ಷ ಬಿ.ದೇವೇಗೌಡ, ಎನ್.ಚಲಪತಿ, ವೆಂಕಟೇಶಪ್ಪ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.