ADVERTISEMENT

ಹಬ್ಬದಂತೆ ಶಾಲೆ ಪ್ರಾರಂಭೋತ್ಸವಕ್ಕೆ ಸಿದ್ದತೆ

​ಪ್ರಜಾವಾಣಿ ವಾರ್ತೆ
Published 28 ಮೇ 2018, 12:49 IST
Last Updated 28 ಮೇ 2018, 12:49 IST

ಕೋಲಾರ: ಬೇಸಿಗೆಯ ರಜೆ ಮುಗಿಸಿ ಸೋಮವಾರ (ಮೇ 28) ರಂದು ಶಾಲೆಗೆ ಬರುವ ಮಕ್ಕಳನ್ನು ಸ್ವಾಗತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಪ್ರಾರಂಭೋತ್ಸವವನ್ನು ಹಬ್ಬದಂತೆ ಆಚರಿಸಲು ಸಿದ್ಧತೆ ಕೈಗೊಂಡಿದೆ.

ಕಲಿಕೆ, ಪರೀಕ್ಷೆ, ಫಲಿತಾಂಶದ ನಂತರ ವಾರ್ಷಿಕ ಬೇಸಿಗೆ ರಜೆ ಮುಗಿಸಿದ್ದಾರೆ. ಶಾಲೆಯನ್ನು ಪುನರಾರಂಭಿಸುವ ಮೂಲಕ ಮಕ್ಕಳಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.

ಜಿಲ್ಲಾದ್ಯಂತ ಹಬ್ಬದ ವಾತಾವರಣದಡಿ ಶೈಕ್ಷಣಿಕ ಕಾರ್ಯಗಳಿಗೆ ಚ್ಯುತಿ ಬಾರದಂತೆ ಶಾಲೆ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸ್ವಾಮಿ ಸೂಚಿಸಿದ್ದಾರೆ. ಅದರಂತೆ ಜಿಲ್ಲೆಯ ಒಟ್ಟು 2,568 ಶಾಲೆಗಳ ಪ್ರಾರಂಭೋತ್ಸವ ನಡೆಯುತ್ತಿದೆ.

ADVERTISEMENT

ಜಿಲ್ಲೆಯಲ್ಲಿ 1 ರಿಂದ 7ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಗಳು ಒಟ್ಟು 1,856 ಇವೆ. 126 ಸರ್ಕಾರಿ ಪ್ರೌಢಶಾಲೆಗಳಿವೆ. ಇಲಾಖೆ ಮಾರ್ಗಸೂಚಿಯಂತೆ ಶಾಲೆಗಳಿಗೆ ತಳಿರು ತೋರಣಗಳಿಂದ ಅಲಂಕರಿಸಿ ಮಕ್ಕಳನ್ನು ಶಾಲೆಗೆ ಆಹ್ವಾನಿಸಲು ಸಿದ್ದವಾಗಿವೆ.

ಉಳಿದಂತೆ ಅನುದಾನಿತ 45 ಪ್ರಾಥಮಿಕ ಹಾಗೂ 60 ಪ್ರೌಢಶಾಲೆಗಳು, ಅನುದಾನರಹಿತ 297 ಪ್ರಾಥಮಿಕ ಹಾಗೂ 143 ಪ್ರೌಢಶಾಲೆಗಳು ಇವೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 16 ಮೊರಾರ್ಜ ದೇಸಾಯಿ, 4 ಕಿತ್ತೂರು ರಾಣಿ ಚನ್ನಮ್ಮ, 3 ಅಂಬೇಡ್ಕರ್ ಹಾಗೂ 1 ಏಕಲವ್ಯ ವಸತಿ ಶಾಲೆಗಳಿದ್ದು ಮಕ್ಕಳನ್ನು ಸ್ವಾಗತಿಸಲು ಸಜ್ಜಾಗಿವೆ.

‘ಶಾಲಾ ಪ್ರಾರಂಭೋತ್ಸವದಂದು ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸುವುದು, ಕುಡಿಯಲು ನೀರು ಒದಗಿಸುವುದು, ಶೌಚಾಲಯ ಸುಸ್ಥಿತಿಯಲ್ಲಿಡುವುದು, ಬಿಸಿಯೂಟದ ವ್ಯವಸ್ಥೆ ಹಾಗೂ ತಳಿರು ತೋರಣಗಳಿಂದ ಅಲಂಕರಿಸಲು ಆಯಾ ಶಾಲಾ ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸ್ವಾಮಿ ತಿಳಿಸಿದ್ದಾರೆ.

‘ಇಲಾಖೆ ಮಿಂಚಿನ ಸಂಚಾರಕ್ಕಾಗಿ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಶಾಲೆಗಳಲ್ಲಿ ಶಾಲಾ ಆರಂಭೋತ್ಸವ ಮಾಡಿರುವ ಕುರಿತು, ಪಠ್ಯಪುಸ್ತಕ, ಬಟ್ಟೆ ವಿತರಣೆ ಕುರಿತು ಪರಿಶೀಲನೆ ನಡೆಸಲಾಗಿದೆ. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತುವ ಪ್ರಯತ್ನ ಇಲಾಖೆಯಿಂದ ನಡೆಯುತ್ತಿದೆ’ ಎಂದು ಹೇಳಿದರು.

‘ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯ, ಸಮವಸ್ತ್ರ, ಶೂ, ಸಾಕ್ಸ್ ನೀಡುವ ಕುರಿತು ತಿಳಿಸಬೇಕು. ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು, ದಾಖಲಾತಿ ಆಂದೋಲನದ ನಂತರವೂ ಅಂತಹ ಮಗು ಕಂಡು ಬಂದರೆ ಸಾರ್ವಜನಿಕರು, ಸಂಘ ಸಂಸ್ಥೆಗಳು 1098ಗೆ ಉಚಿತ ಸಹಾಯವಾಣಿಗೆ ಮಾಹಿತಿ ನೀಡಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.