ADVERTISEMENT

ಹೂಳು ತೆಗೆದ ಕಲ್ಯಾಣಿಯಲ್ಲಿ ಜಲಪೂರಣ

ವಿ.ರಾಜಗೋಪಾಲ್
Published 8 ಅಕ್ಟೋಬರ್ 2017, 9:01 IST
Last Updated 8 ಅಕ್ಟೋಬರ್ 2017, 9:01 IST
ಮಾಲೂರು ತಾಲ್ಲೂಕಿನ ಕುಡಿಯನೂರು ಗ್ರಾಮದಲ್ಲಿ ಹೂಳು ತುಂಬಿರುವ ಕಲ್ಯಾಣಿಯನ್ನು ಯುವ ಬ್ರಿಗೇಡ್‌ ತಂಡದ ಕಾರ್ಯಕರ್ತರು ಸ್ವಚ್ಚತೆಗೊಳಿಸಿದರು
ಮಾಲೂರು ತಾಲ್ಲೂಕಿನ ಕುಡಿಯನೂರು ಗ್ರಾಮದಲ್ಲಿ ಹೂಳು ತುಂಬಿರುವ ಕಲ್ಯಾಣಿಯನ್ನು ಯುವ ಬ್ರಿಗೇಡ್‌ ತಂಡದ ಕಾರ್ಯಕರ್ತರು ಸ್ವಚ್ಚತೆಗೊಳಿಸಿದರು   

ಶತಮಾನಗಳ ಕಾಲ ತುಂಬಿ ಭಕ್ತಿ ಸಂಪ್ರದಾಯದ ತಾಣವಾಗಿದ್ದ ಕಲ್ಯಾಣಿಗಳು ನಿರ್ವಹಣೆ ಇಲ್ಲದೆ ಬತ್ತಿ ಬರಡಾಗಿರುವುದು ಎಲ್ಲೆಡೆ ಕಾಣ ಸಿಗುತ್ತದೆ. ಸ್ವಚ್ಛತೆ ಕೊರತೆ, ತುಂಬಿದ ಹೂಳು ಸಹ ಇದಕ್ಕೆಕಾರಣ. ಕಲ್ಯಾಣಿ ತುಂಬಿದ ಹೂಳೆತ್ತಿದರೆ ಜೀವಜಲ ಉಕ್ಕಿ ಹರಿಯಬಹುದೆಂಬ ಯೋಚನೆ ಬೆಂಗಳೂರಿನ ಕೆಲ ಯುವಕರ ಮನದಲ್ಲಿ ಹೊಳೆದಿದ್ದೇ ತಡ. ಕಾರ್ಯಾಚರಣೆ ನಡಸೆ ಯಶಸ್ಸು ಗಳಿಸಿದ ಯಶೋಗಾಥೆ ಇಲ್ಲಿದೆ.

ಮಾಲೂರು ಪಟ್ಟಣದ ನಿವಾಸಿ ಬೆಂಗಳೂರಿನ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ವಸಂತಕುಮಾರ್ ಮತ್ತು ಸಂಗಡಿಗರು ಕೂಡಿ ಸಮಾಜಮುಖಿ ಕೆಲಸ ಮಾಡಲು ತೀರ್ಮಾನಿಸಿದರು. ಅದಕ್ಕಾಗಿ ಯುವ ಬ್ರಿಗೇಡ್‌ ರಚಿಸಿದರು. ತಮ್ಮ ಬ್ರಿಗೇಡ್‌ನೊಂದಿಗೆ ರಜಾ ದಿನಗಳಲ್ಲಿ ಊರಿಗೆ ಬಂದು ವಿವಿಧ ವಾರ್ಡ್‌ಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸುತ್ತಿದ್ದರು. ಮುಖ್ಯ ರಸ್ತೆಗಳ ಬದಿಯಲ್ಲಿ ವಿವಿಧ ಜಾತಿಯ ಹಣ್ಣುಗಳ ಸಸಿ ನೆಟ್ಟರು. ಊರವರಿಗೂ ಗಿಡ ಕೊಟ್ಟು ಪರಿಸರ ಜಾಗೃತಿ ಮೂಡಿಸಿದರು.

ಪಟ್ಟಣದ ಪಟಾಲಮ್ಮ ದೇಗುಲದ ಬಳಿ ಇರುವ 4 ಅಶ್ವತ್ಥ ಕಟ್ಟೆಗಳನ್ನು ಸ್ವಚ್ಛ ಗೊಳಿಸಿದರು. ಅದರ ಪಕ್ಕದಲ್ಲಿಯೇ ಪಾಳು ಬಿದ್ದಿದ್ದ ಪುರಾತನ ಸಣ್ಣ ಅಂಜನೇಯಸ್ವಾಮಿ ದೇಗುಲ ದುರಸ್ತಿಗೊಳಿಸಿದರು. ಈಗ ಅಲ್ಲಿ ಪ್ರತಿದಿನ ಪೂಜೆ ನಡೆಯುವಂತಾಗಿದೆ. ಊರ ಜನರಲ್ಲಿಯೂ ಯುವ ತಂಡದ ಬಗ್ಗೆ ವಿಶ್ವಾಸ ಮೂಡಲು ನೆರವಾಯಿತು. ನಿರಂತರ ಸಮಾಜಮುಖಿ ಕೆಲಸದ ಮೂಲಕ ಗಮನ ಸೆಳೆಯುತ್ತಿರುವ ಯುವ ತಂಡದ ಸದಸ್ಯರ ಬಗ್ಗೆ ಗ್ರಾಮಸ್ಥರಲ್ಲಿ ಅಭಿಮಾನ, ಪ್ರೀತಿಯ ಭಾವನೆ ಬೆಳೆದಿದೆ. ತಮ್ಮ ಮನೆಯ ಮಕ್ಕಳಂತೆ ಗೌರವಿಸುತ್ತಿದ್ದಾರೆ.

ADVERTISEMENT

ವಸಂತಕುಮಾರ್ ಮತ್ತು ತಂಡ ಪದ್ಮಾವತಿ ವೆಂಕಟರಮಣಸ್ವಾಮಿ ದೇವಾಲಯದ ಕಲ್ಯಾಣಿಯನ್ನು ಮೂರು ಭಾನುವಾರಗಳಂದು ಗ್ರಾಮಸ್ಥರ ಸಹಕಾರ ಪಡೆದು ಹೂಳೆತ್ತಲು ಆರಂಭಿಸಿತು. ಸುಮಾರು 100 ಜನ ಸೇವಾ ಕಾರ್ಯದಲ್ಲಿ ಕೈಜೋಡಿಸಿದರು. 50 ಅಡಿ ಆಳದ 60X120 ಅಡಿ ಅಳತೆಯ ಕಲ್ಯಾಣಿಯಲ್ಲಿ ಹತ್ತಾರು ವರ್ಷಗಳಿಂದ ತುಂಬಿದ್ದ ಮಣ್ಣು ಗಿಡ ಗಂಟಿ ತೆರವುಗೊಳಿಸಿದರು.

ತುಂಬಿದ್ದ ಹೂಳನ್ನು ಹೊರ ಹಾಕಿದರು. ಆಳದಲ್ಲಿದ್ದ ಜಲದ ಸೆಲೆ ಮೇಲೆ ಚಿಮ್ಮುತ್ತಿದ್ದಂತೆ ಯುವ ತಂಡದಲ್ಲಿಯೂ ಸಂತಸ ಬುಗ್ಗೆ ಉಕ್ಕಿತು. ನಂತರ ಸತತ ಬಂದ ಮಳೆಯಿಂದಾಗಿ ಈಗಾಗಲೇ 6 ಅಡಿಯಷ್ಟು ನೀರು ಸಂಗ್ರಹವಾಗಿದೆ. ಇದರ ಜೊತೆಗೆ ಪಕ್ಕದ ಕೊಳವೆ ಬಾವಿಗಳಲ್ಲಿಯೂ ಅಂತರ್ಜಲ ಮಟ್ಟ ಏರುತ್ತಿದೆ. ಅಕ್ಕ ಪಕ್ಕದ ಜಮೀನುಗಳೂ ತಂಪಾಗುತ್ತಿವೆ. ಯುವಕರು ಮಾಡಿದ ಕೆಲಸ ಊರಿನ ಜನರ ಕಣ್ಣು ತೆರೆಸುವಂತೆ ಮಾಡಿದೆ ಎನ್ನುತ್ತಾರೆ ರೈತ ಗೋಪಾಲಯ್ಯ.

ಪುರಾತನ ಕಲ್ಯಾಣಿ: ನೂರಾರು ವರ್ಷಗಳಿಂದ ಪದ್ಮಾವತಿ ವೆಂಕಟರಮಣಸ್ವಾಮಿಯ ಪೂಜಾ ಕಾರ್ಯಗಳಿಗೆ ಕಲ್ಯಾಣಿಯ ನೀರನ್ನು ಬಳಕೆ ಮಾಡಲಾಗುತ್ತಿತ್ತು. ವೆಂಕಟರಮಣ ಸ್ವಾಮಿ ದರ್ಶನಕ್ಕೆ ಬರುತ್ತಿದ್ದ ಪುರೋಹಿತರು ಹಾಗೂ ಭಕ್ತರು ಗ್ರಾಮದಲ್ಲಿ ಉಳಿಯುತ್ತಿದ್ದಾಗ ಕಲ್ಯಾಣಿಯಲ್ಲಿಯೇ ಮಡಿ ಸ್ನಾನ ಮಾಡುತ್ತಿದ್ದರು. ಬದಲಾದ ವ್ಯವಸ್ಥೆಯಲ್ಲಿ ಮತ್ತು ನಿರ್ವಹಣೆಯ ಕೊರತೆಯಿಂದ ಕಲ್ಯಾಣಿ ನೀರು ಕೊಚ್ಚೆಯಾಯಿತು. ಬಳಕೆಯಾಗದ ಕಾರಣ ಹೂಳು ತುಂಬಿ ಇತಿಹಾಸ ಸೇರಿತ್ತು ಎಂದು ಸ್ಮರಿಸುತ್ತಾರೆ ಅರ್ಚಕ ರಾಮಾಚಾರ್ ನೆನಪಿಸಿಕೊಳ್ಳುತ್ತಾರೆ.

ಕಲ್ಯಾಣಿಯಲ್ಲಿ ನೀರಿನ ಸ್ವಚ್ಛತೆ ಮತ್ತು ನಿರ್ವಹಣೆಗೆ ಗ್ರಾಮ ಪಂಚಾಯಿತಿ ಆದ್ಯತೆ ನೀಡುತ್ತಿದೆ. ಕಲ್ಯಾಣಿ ಸುತ್ತ ಕಬ್ಬಿಣದ ಗ್ರಿಲ್‌ ಬೇಲಿ ನಿರ್ಮಿಸಿ, ಬಾಗಿಲು ಹಾಕಲಾಗುವುದು. ಮುಂದಿನ ಶಿವರಾತ್ರಿ ದಿನ ಕಲ್ಯಾಣಿಯಲ್ಲಿ ದೀಪೋತ್ಸವ ಆಚರಿಸುವ ಮೂಲಕ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಆಚರಣೆಗೆ ಮತ್ತೆ ಚಾಲನೆ ನೀಡಲಾಗುವುದು ಎಂದು ಕುಡಿಯನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ ತಿಳಿಸಿದರು.

ಹಿಂದಿನಿಂದಲೂ ಕುಡಿಯುವ ನೀರಿಗಾಗಿ ಕೆರೆ ಮತ್ತು ಬಾವಿಗಳು ಆಶ್ರಯವಾಗಿದ್ದವು. ಕೊಳವೆ ಬಾವಿಗಳಿಂದಾಗಿ ಅಂತರ್ಜಲ ಬತ್ತಿ ಬಾವಿಗಳು ಬರಿದಾಗಿವೆ. ಕೆಲವು ಬಾವಿಗಳನ್ನು ನೀರಿಲ್ಲದ ಕಾರಣಮುಚ್ಚಲಾಗಿದೆ. ಇನ್ನೂ ಕೆಲವು ಹೂಳು ತುಂಬಿ ತಿಪ್ಪೆಗುಂಡಿಗಳಾಗಿವೆ. ಇಂತಹ ಬಾವಿಗಳನ್ನು ಸ್ವಚ್ಛ ಗೊಳಿಸಿ, ಮರುಪೂರಣದ ವ್ಯವಸ್ಥೆ ಮಾಡಿದರೆ ಅಂತರ್ಜಲ ಹೆಚ್ಚಬಹುದು ಎಂಬುದು ಬ್ರಿಗೇಡ್‌ ವಿಶ್ವಾಸ. ಅದಕ್ಕಾಗಿ ಕಲ್ಯಾಣಿ ಸ್ವಚ್ಛಗೊಳಿಸಲಾಯಿತು. ಇದೇ ರೀತಿ ಸುತ್ತಲಿನ ಇತರ ಕಲ್ಯಾಣಿ, ಬಡಾವಣೆಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಬ್ರಿಗೇಡ್‌ ಯುವ ತಂಡದ ನೇತೃತ್ವ ವಹಿಸಿರುವ ಎಚ್‌.ಆರ್‌. ವಸಂತಕುಮಾರ್‌ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.