ADVERTISEMENT

ವಿಸ್ಟ್ರಾನ್‌ ಕಂಪನಿಗೆ ₹ 437.70 ಕೋಟಿ ನಷ್ಟ

ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ: 150 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 20:44 IST
Last Updated 13 ಡಿಸೆಂಬರ್ 2020, 20:44 IST
–ಸಂಗ್ರಹ ಚಿತ್ರ
–ಸಂಗ್ರಹ ಚಿತ್ರ   

ಕೋಲಾರ: ತಾಲ್ಲೂಕಿನ ವಿಸ್ಟ್ರಾನ್‌ ಇನ್ಫೋಕಾಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಮೇಲೆ ಕಾರ್ಮಿಕರು ನಡೆಸಿದ ದಾಳಿಯಲ್ಲಿ ₹ 437.70 ಕೋಟಿ ನಷ್ಟ ಸಂಭವಿಸಿದ್ದು, ಪ್ರಕರಣ ಸಂಬಂಧ 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ವಿಸ್ಟ್ರಾನ್‌ ಕಂಪನಿ ಕಾರ್ಮಿಕರ ವೇತನ ಪಾವತಿ ಮತ್ತು ಹಾಜರಾತಿ ದಾಖಲೆಪತ್ರ ನಿರ್ವಹಣೆಯಲ್ಲಿ ಉಂಟಾದ ಗೊಂದಲ, ಕಾರ್ಮಿಕರು ಹಾಗೂ ಆಡಳಿತ ವರ್ಗದವರ ನಡುವೆ ಕೈಗಾರಿಕಾ ಬಾಂಧವ್ಯ ಸರಿ ಇಲ್ಲದಿರುವುದು ಘಟನೆಗೆ ಮುಖ್ಯ ಕಾರಣವೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ್ ಬಿ.ಪಾಟೀಲ್‌ ಅವರು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ವರದಿ ಸಲ್ಲಿಸಿದ್ದಾರೆ.

ಕಂಪನಿಯು 6 ಖಾಸಗಿ ಏಜೆನ್ಸಿಗಳ ಮೂಲಕ 8,490 ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನಿಯೋಜಿಸಿಕೊಂಡಿತ್ತು. ಜತೆಗೆ 1,343 ಕಾರ್ಮಿಕರನ್ನು ಕಾಯಂ ನೌಕರರಾಗಿ ನೇಮಿಸಿಕೊಂಡಿತ್ತು. ಏಜೆನ್ಸಿಗಳು ಗುತ್ತಿಗೆ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಪಾವತಿಸದ ಕಾರಣ ಕಾರ್ಮಿಕರು ಆಕ್ರೋಶಗೊಂಡು ಕಂಪನಿ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಕಂಪನಿಯಲ್ಲಿ ಕಾರ್ಮಿಕ ಸಂಘಗಳು ಅಸ್ತಿತ್ವದಲ್ಲಿಲ್ಲ. ವೇತನದ ವಿಚಾರವಾಗಿ ಕಾರ್ಮಿಕರು ಈವರೆಗೆ ಯಾವುದೇ ದೂರು ಕೊಟ್ಟಿಲ್ಲ. ಕಾರ್ಮಿಕ ದಾಳಿ ನಡೆಯುವವರೆಗೂ ಕಂಪನಿಯಲ್ಲಿ ಯಾವುದೇ ಕೈಗಾರಿಕಾ ವಿವಾದವಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಂಟಿ ಪರಿಶೀಲನೆ: ಜಿಲ್ಲಾ ಕಾರ್ಮಿಕ ಅಧಿಕಾರಿ, ಕಾರ್ಖಾನೆ ಮತ್ತು ಬಾಯ್ಲರ್‌ ಇಲಾಖೆ ಉಪ ನಿರ್ದೇಶಕರು, ಕಾರ್ಮಿಕ ನಿರೀಕ್ಷಕರು ಕಂಪನಿಯಲ್ಲಿ ಜಂಟಿ ಪರಿಶೀಲನೆ ನಡೆಸಿದ್ದಾರೆ. ಕಾರ್ಮಿಕರ ವೇತನ ಬಾಕಿ ಉಳಿಸಿಕೊಂಡಿರುವ ಸಂಬಂಧ ಕಾರ್ಮಿಕ ಅಧಿಕಾರಿಯು ಕಂಪನಿ ಪ್ರತಿನಿಧಿಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ವೇತನ ಪಾವತಿಯಾಗದ ಪ್ರಕರಣಗಳ ಸಂಬಂಧ ವೇತನ ಪಾವತಿ ಕಾಯ್ದೆ–1936ರ ಅಡಿ ಕಾರ್ಮಿಕ ಇಲಾಖೆ ಉಪ ಆಯುಕ್ತರ ಎದುರು ಕ್ಲೈಂ ಅರ್ಜಿ ದಾಖಲು ಮಾಡುವುದಾಗಿ ಕಾರ್ಖಾನೆ ಮತ್ತು ಬಾಯ್ಲರ್‌ ಇಲಾಖೆ ಉಪ ನಿರ್ದೇಶಕರು ಕಂಪನಿ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಘಟನೆ ಸಂಬಂಧ ಬೆಂಗಳೂರಿನಲ್ಲಿ ಕಂಪನಿ ಆಡಳಿತ ಮಂಡಳಿ ಪ್ರತಿನಿಧಿಗಳು ಮತ್ತು ಕಾರ್ಮಿಕ ಮುಖಂಡರ ಜತೆ ಸೋಮವಾರ (ಡಿ.14) ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಆಯುಕ್ತ ಅಕ್ರಮ್‌ ಪಾಷಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.