ADVERTISEMENT

11 ಲಕ್ಷ ಪಡಿತರ ಚೀಟಿಗೆ ಸೀಮೆಎಣ್ಣೆ ಬಂದ್

ಪಿಡಿಒ, ಕಾರ್ಯದರ್ಶಿ ಸೇವೆ ಪಡೆಯಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 10:07 IST
Last Updated 4 ಜುಲೈ 2013, 10:07 IST

ಕೋಲಾರ: ಅಡುಗೆ ಅನಿಲ ಸೌಕರ್ಯ ಹೊಂದಿದ್ದರೂ ಹೊಂದಿಲ್ಲ ಎಂದು ಸುಳ್ಳು ಮಾಹಿತಿ ನೀಡಿ ಸೀಮೆ ಎಣ್ಣೆ ಪಡೆಯುತ್ತಿರುವ ರಾಜ್ಯದ 11 ಲಕ್ಷ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ಪೂರೈಕೆಯನ್ನು ಶೀಘ್ರವೇ ಸ್ಥಗಿತಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತ ಹರ್ಷ್‌ಗುಪ್ತಾ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿ, ವಿದ್ಯುತ್ ಬಿಲ್‌ನ ಆರ್‌ಆರ್ ಸಂಖ್ಯೆಯನ್ನು ಆಧರಿಸಿ ಪಡಿತರ ಚೀಟಿದಾರರ ಅಂಕಿ-ಅಂಶವನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿ 11 ಲಕ್ಷ ಮಂದಿ ಅನಧಿಕೃತವಾಗಿ ಸೀಮೆ ಎಣ್ಣೆ ಪಡೆಯುತ್ತಿರುವುದು ಗೊತ್ತಾಗಿದೆ ಎಂದರು.

ಆಹಾರ ಧಾನ್ಯಗಳು ಗೋದಾಮುಗಳಲ್ಲೇ ಹೆಚ್ಚು ಸೋರಿಕೆಯಾಗುತ್ತವೆ. ಅದನ್ನು ತಡೆಯುವ ನಿಟ್ಟಿನಲ್ಲಿ ಹೊಸ ಕ್ರಮ ಕೈಗೊಳ್ಳಲಾಗುವುದು.  ಸಗಟು ಗೋದಾಮಿನಿಂದ ಪಡಿತರ ಆಹಾರ ಧಾನ್ಯವನ್ನು ಪಡೆಯುವ ಸಂದರ್ಭದಲ್ಲಿ ಲೈಸೆನ್ಸ್ ಉಳ್ಳವರ ಬೆರಳು ಮುದ್ರೆ ನೀಡುವ (ಬಯೋಮೆಟ್ರಿಕ್) ವ್ಯವಸ್ಥೆಯನ್ನು ಜಾರಿಗೆತರುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.

ಪಿಡಿಓ ಸೇವೆ: ಬಿಪಿಎಲ್ ಕುಟುಂಬಗಳಿಗೆ ಕೆ.ಜಿ.ಗೆ 1 ರೂಪಾಯಿ ದರದಲ್ಲಿ ಅಕ್ಕಿ ವಿತರಿಸುವ ಸರ್ಕಾರದ ನಿರ್ಧಾರ ಪ್ರಕಟಿಸಿದ ಬಳಿಕ ಪಡಿತರ ಚೀಟಿಗೆ ಅರ್ಜಿದಾರರ ಸಂಖ್ಯೆ ಹೆಚ್ಚಾಗಿದೆ. ನಕಲಿ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚುವುದು, ಹೊಸ  ಅರ್ಜಿದಾರರಿಗೆ ಚೀಟಿ ನೀಡುವುದು ಸೇರಿದಂತೆ ಹೆಚ್ಚಿರುವ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ ಸೇವೆಯನ್ನು ಪಡೆಯಲು ಚಿಂತನೆ ನಡೆಯುತ್ತಿದೆ. ಈಗಾಗಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಡನೆ ಮಾತುಕತೆ ನಡೆಸಲಾಗಿದೆ ಎಂದರು.

ಪಡಿತರ ಚೀಟಿ ಕೆಲಸದಲ್ಲಿ ಪಾಲ್ಗೊಳ್ಳುವುದು ತಮ್ಮ ಜವಾಬ್ದಾರಿಯಲ್ಲ ಎಂಬ ಭಾವನೆ ಬಹಳಷ್ಟು ಪಿಡಿಒಗಳಲ್ಲಿದೆ. ಅದನ್ನು ಬಿಡಬೇಕು. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಜಾರಿಗೆ ಎಲ್ಲರೂ ಸಹಕರಿಸಬೇಕು. ಗ್ರಾಮ ಪಂಚಾಯಿತಿಗಳನ್ನು ಶಕ್ತಗೊಳಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿಗಳಲ್ಲಿ ಪಡಿತರ ಚೀಟಿ ಅರ್ಜಿಗಳನ್ನು ಅಪ್‌ಲೋಡ್ ಮಾಡಲು ಇಂಟರ್‌ನೆಟ್ ಮತ್ತು ಸರ್ವರ್ ಸಮಸ್ಯೆ ಎದುರಾದರೆ ಆಯಾ ಹೋಬಳಿ ಕೇಂದ್ರದ ನಾಡ ಕಚೇರಿ-ಅಟಲ್ ಜನಸ್ನೇಹಿ ಕೇಂದ್ರಕ್ಕೆ ತೆರಳಿ ಅಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯೊಡನೆಯೂ ಚರ್ಚಿಸಲಾಗುವುದು ಎಂದರು.

ಸಮಗ್ರ ತಪಾಸಣೆ: ನ್ಯಾಯಬೆಲೆ ಅಂಗಡಿಗಳ ಸಮಗ್ರ ವ್ಯವಹಾರದ ತಪಾಸಣೆ ಮಾಡಿ ಕ್ರಮ ಕೈಗೊಳ್ಳುವ ಬಗ್ಗೆ ಶೀಘ್ರದಲ್ಲೇ ಆದೇಶ ಹೊರ ಬೀಳಲಿದೆ. ಕನಿಷ್ಠ ವರ್ಷಕ್ಕೊಮ್ಮೆಯಾದರೂ ಒಂದು ಅಂಗಡಿಯ ಎಲ್ಲ ಪಡಿತರಚೀಟಿದಾರರ ಮನೆಗಳಿಗೆ ಹೋಗಿ ತಪಾಸಣೆ ಮಾಡಬೇಕು. ಕಾರ್ಡ್‌ದಾರರು ಇದ್ದಾರೆಯೇ? ನಕಲಿ ಕಾರ್ಡು ಪಡೆದಿರುವರೇ? ಅಡುಗೆ ಅನಿಲ ಬಳಕೆ ಇದೆಯೇ? ಮೊದಲಾದ ಅಂಶಗಳ ತಪಾಸಣೆ ಮಾಡಿದರೆ ಆಹಾರ ಧಾನ್ಯದ ಸೋರಿಕೆಯನ್ನು ತಡೆಯಬಹುದು. ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಅಂಗಡಿಗಳನ್ನು ಆಯ್ಕೆ ಮಾಡಬೇಕು ಎಂದರು.

ಸಿದ್ಧತೆ ನಡೆಸಿ: ಇದೇ 10ರಂದು ಅಕ್ಕಿ ಯೋಜನೆಯು ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿದೆ. ಜಿಲ್ಲಾ ಮಟ್ಟದಲ್ಲೂ ಯೋಜನೆಗೆ ಉತ್ತಮ ರೀತಿಯಲ್ಲಿ ಚಾಲನೆ ನೀಡಬೇಕು. ಹೆಚ್ಚುವರಿಯಾಗಿ ಪೂರೈಕೆಯಾಗಲಿರುವ ಅಕ್ಕಿಯನ್ನು ದಾಸ್ತಾನು ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.

ರಾಜ್ಯದ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಹಲವು ತೊಂದರೆಗಳಿವೆ. ಅದನ್ನು ಸರಿಪಡಿಸಲು ಕನಿಷ್ಠ 3 ತಿಂಗಳು ಬೇಕಾಗಬಹುದು. ಎಲ್ಲ ಅಧಿಕಾರಿ ಸಿಬ್ಬಂದಿ ಶ್ರಮಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.