ADVERTISEMENT

ಜಾತಿ, ಧರ್ಮಗಳ ನಡುವೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 9:10 IST
Last Updated 27 ಜನವರಿ 2018, 9:10 IST
ಕೆ.ಆರ್‌.ರಮೇಶ್‌ಕುಮಾರ್‌
ಕೆ.ಆರ್‌.ರಮೇಶ್‌ಕುಮಾರ್‌   

ಕೋಲಾರ: ‘ಬಿಜೆಪಿ ಮುಖಂಡರು ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್ ವಾಗ್ದಾಳಿ ನಡೆಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಹೀಗಾಗಿ ಆ ಪಕ್ಷದ ಮುಖಂಡರು ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಶಾಸಕ ಸುನಿಲ್‌ಕುಮಾರ್‌ ಸೇರಿ ಕೆಲ ಅವಿವೇಕಿಗಳಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ. ಶ್ರೀರಾಮನ ದೇಹದಲ್ಲಿಯೂ ರಕ್ತನೇ, ರಹೀಂ ದೇಹದಲ್ಲೂ ರಕ್ತನೇ ಇರುವುದು. ಈ ಸಂಗತಿ ಆ ಅವಿವೇಕಿಗಳಿಗೆ ಗೊತ್ತಿದ್ದರೆ ತಾನೆ ಎಂದು ಕಿಡಿಕಾರಿದರು.

ಜನ ವಿರೋಧಿ ಕೆಲಸ ಮಾಡಿದರೆ ಮಾತ್ರ ಬಿಜೆಪಿಯಲ್ಲಿ ಜಾಗ ಸಿಗುತ್ತದೆ. ಇದರಿಂದ ಕೆಲ ಮುಖಂಡರು ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಆ ಅವಿವೇಕಿಗಳ ಎಲ್ಲ ಪ್ರಯತ್ನಗಳು ವಿಫಲವಾಗುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿಲ್ಲ ಎಂದರು.

ADVERTISEMENT

ಪೋಡಿ ಮುಕ್ತ: ಜಿಲ್ಲೆಯನ್ನು 2017ರ ನವೆಂಬರ್‌ ಅಂತ್ಯದೊಳಗೆ ಪೋಡಿ ಮುಕ್ತ ಜಿಲ್ಲೆಯಾಗಿ ಮಾಡಬೇಕೆಂದು ನಿರ್ಧರಿಸಿದ್ದೆವು. ಆದರೆ, ಸರ್ವೆ ಇಲಾಖೆಯುವರು ತಮ್ಮ ವೇಗಕ್ಕೆ ಸ್ಪಂದಿಸದೆ ಸಬೂಬು ಹೇಳುತ್ತಿದ್ದಾರೆ. ಅವರು ವಿಳಂಬ ಮಾಡಿದರೆ ತರಾಟೆಗೆ ತೆಗೆದುಕೊಳ್ಳುವುದು ಹೇಗೆಂದು ಗೊತ್ತಿದೆ. ಗಲಾಟೆ ಮಾಡಿದರೆ ಕೆಲಸ ಆಗುವುದಿಲ್ಲ. ಅವರ ಮನಸ್ಸಿನಲ್ಲಿ ಏನು ಆಲೋಚನೆ ಇದೆಯೋ ಗೊತ್ತಿಲ್ಲ. ಜಿಲ್ಲೆಯು ಫೆಬ್ರುವರಿಯೊಳಗೆ ಪೋಡಿ ಮುಕ್ತವಾಗುವುದು ಖಚಿತ ಎಂದು ಹೇಳಿದರು.

ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಅದಕ್ಕೆ ಸಂಬಂಧಪಟ್ಟ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ. ತಾನು ಯಾವುದೇ ಇನ್‌ಸ್ಪೆಕ್ಟರ್‌, ಎಸ್‌ಐಗೂ ಕರೆ ಮಾಡುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ತಿಳಿಸಿದರು.

ಗೊಂದಲ ಸೃಷ್ಟಿ: ಕೆ.ಸಿ ವ್ಯಾಲಿ ಯೋಜನೆಯಿಂದ ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಬಾರಿ ಶುದ್ಧೀಕರಿಸಿ ಜಿಲ್ಲೆಗೆ ಹರಿಸುತ್ತಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಅಗತ್ಯವಿದ್ದರೆ ಮೂರನೇ ಬಾರಿ ನೀರು ಶುದ್ಧೀಕರಿಸಲು ಸರ್ಕಾರ ಸಿದ್ಧವಿದೆ. ಭಾರತೀಯ ವಿಜ್ಞಾನ ಸಂಸ್ಥೆಯಿಂದ (ಐಐಎಸ್‌ಸಿ) ಹೊರ ಬಂದಿರುವ ವಿಜ್ಞಾನಿಯೊಬ್ಬರು ಯೋಜನೆ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ತಕ್ಕಂತೆ ರಾಜಕೀಯ ನಾಯಕರು ಕುಣಿಯುತ್ತಿದ್ದಾರೆ. ಅನುಭವದಲ್ಲಿ ಇದೇ ಮೊದಲು ಶಾಶ್ವತವಾಗಿ ನೀರು ನೋಡುತ್ತಿದ್ದೇವೆ. ಆ ನಾಯಕರಿಗೆ ಪರಿಜ್ಞಾನ ಬೇಡವೇ ಎಂದು ಪ್ರಶ್ನಿಸಿದರು.

ಕ್ಯಾನ್ಸರ್‌ ಕೇಂದ್ರ: ಟಾಟಾ ಟ್ರಸ್ಟ್‌ನವರು ದೇಶದ ಮುಂಬೈ ಮತ್ತು ಕೋಲ್ಕತ್ತದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪಿಸಿದ್ದಾರೆ. ಅದೇ ಟ್ರಸ್ಟ್‌ನವರು ಜಿಲ್ಲೆಯಲ್ಲೂ ಕ್ಯಾನ್ಸರ್‌ ಕೇಂದ್ರ ತೆರೆಯಲು ಮುಂದೆ ಬಂದಿದ್ದಾರೆ. ಕೇಂದ್ರಕ್ಕೆ ಈಗಾಗಲೇ ಸ್ಯಾನಿಟೋರಿಯಂ ಬಳಿ ಜಮೀನು ಗುರುತಿಸಲಾಗಿದೆ. ಆ ಜಮೀನನ್ನು ದಿವಂಗತ ಚಿಕ್ಕನಂಜಪ್ಪನವರು ಸರ್ಕಾರಕ್ಕೆ ದಾನ ಮಾಡಿದ್ದರು. ಆದರೆ, ಅರಣ್ಯ ಇಲಾಖೆಯವರು ಆ ಜಮೀನು ಇಲಾಖೆಯದೆಂದು ತಗಾದೆ ತೆಗೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಮೀನು ಅರಣ್ಯ ಇಲಾಖೆಯ ಜಾಗವಾಗಿದ್ದರೆ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಸ್ಯಾನಿಟೋರಿಯಂ ಕಟ್ಟಡವನ್ನು ಹೇಗೆ ಉದ್ಘಾಟಿಸುತ್ತಿದ್ದರು. ಅರಿವಿಲ್ಲದೆ ಅಡ್ಡಿಪಡಿಸದ ಮಾತ್ರಕ್ಕೆ ಹೆದರುವುದಿಲ್ಲ. ಆ ಜಾಗ ಸಿಗದಿದ್ದರೂ ಪರ್ಯಾಯವಾಗಿ ಇನ್ನೊಂದು ಕಡೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಬಳಿ ಜಾಗ ಗುರುತಿಸಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ಪಡೆದು ಟಾಟಾ ಟ್ರಸ್ಟ್‌ಗೆ ಹಸ್ತಾಂತರ ಮಾಡಲಾಗುವುದು ಎಂದು ವಿವರಿಸಿದರು.

* * 

ಈ ಚುನಾವಣೆ ಕೊನೆಯದು. ಜನ ನೀಡಿರುವ ಜವಾಬ್ದಾರಿಯ ನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದೇನೆ. ಜೀವನದಲ್ಲಿ ನನ್ನ ಕನಸುಗಳೇನು ಎಂಬ ಬಗ್ಗೆ ಪುಸ್ತಕ ಬರೆಯುತ್ತೇನೆ
ಕೆ.ಆರ್‌.ರಮೇಶ್‌ಕುಮಾರ್‌ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.