ADVERTISEMENT

ಗೊಬ್ಬರಕ್ಕಾಗಿ ಸೆಣಬು ಬೆಳೆದ ರೈತ

ಗಮನ ಸೆಳೆಯುತ್ತಿದೆ ರೈತ ಎನ್‌.ಚಂದ್ರಶೇಖರ್‌ ಕಾರ್ಯ

ಆರ್.ಚೌಡರೆಡ್ಡಿ
Published 16 ಸೆಪ್ಟೆಂಬರ್ 2020, 5:25 IST
Last Updated 16 ಸೆಪ್ಟೆಂಬರ್ 2020, 5:25 IST
ಚಂದ್ರಶೇಖರ್‌
ಚಂದ್ರಶೇಖರ್‌   

ಶ್ರೀನಿವಾಸಪುರ: ತಾಲ್ಲೂಕಿನ ನೀಲಟೂರು ಗ್ರಾಮದ ಸಮೀಪ ರೈತರೊಬ್ಬರು ತಮ್ಮ ಮಾವಿನ ತೋಟದಲ್ಲಿ ಹಸಿರು ಗೊಬ್ಬರವಾಗಿ ಪರಿವರ್ತಿಸಲು ಸನ್‌ ಹೆಂಪ್‌ (ಸೆಣಬು) ಬೆಳೆಯುವುದರ ಮೂಲಕ ಗಮನ ಸೆಳೆದಿದ್ದಾರೆ.

ನೀಲಟೂರು ಗ್ರಾಮದ ಮಾವು ಬೆಳೆಗಾರ ಎನ್‌.ಚಂದ್ರಶೇಖರ್‌ ತಮ್ಮ ಮಾವಿನ ತೋಟದಲ್ಲಿ ಮಳೆ ಆಶ್ರಯದಲ್ಲಿ ಸೆಣಬು ಬೆಳೆದಿದ್ದಾರೆ. ಅದು ಈಗ ಹೂ ಬರುವ ಹಂತ ತಲುಪಿದ್ದು, ಹಸಿರು ಗೊಬ್ಬರ ತಯಾರಿಕೆಗೆ ಪೂರಕವಾಗಿದೆ. ದಟ್ಟವಾಗಿ ಆಳೆತ್ತರ ಬೆಳೆದಿರುವ ಈ ಗಿಡಗಳನ್ನು ಕಟ್ಟರ್‌ ಬಳಸಿ ಕತ್ತರಿಸಿ ಮಣ್ಣಿಗೆ ಸೇರಿಸಿದರೆ ಸಾಕು, ಕೆಲವೇ ದಿನಗಳಲ್ಲಿ ಕೊಳೆತು ಹಸಿರು ಗೊಬ್ಬರವಾಗಿ ಮಾರ್ಪಡುತ್ತದೆ. ಮಾವಿನ ಮರಗಳ ಬೆಳವಣಿಗೆಗೆ ಅಗತ್ಯವಾದ ಸತ್ವವನ್ನು ಒದಗಿಸುತ್ತದೆ.

‘ಮಳೆ ತೇವಾಂಶ ಬಳಸಿಕೊಂಡು ಬೀಜ ಬಿತ್ತನೆ ಮಾಡಿದರೆ ಸಾಕು. ದಟ್ಟವಾಗಿ ಬೆಳೆದು ನಿಲ್ಲುತ್ತದೆ. ಈ ಗೊಬ್ಬರದ ಗಿಡ ತೋಟದಲ್ಲಿ ಭೂ ಸವಕಳಿ ತಡೆಯುತ್ತದೆ. ಮಳೆ ನೀರನ್ನು ಭೂಮಿಗೆ ಸೇರಿಸಲು ಸಹಾಯಕವಾಗುತ್ತದೆ. ಮರಗಳಿಗೆ ಅಗತ್ಯವಾದಪೋಷಕಾಂಶ ಒದಗಿಸುತ್ತದೆ ಹಾಗೂ ಕಳೆ ನಿಯಂತ್ರಣಕ್ಕೆ ಸಹಕಾರಿಯಾಗಿದೆ’ ಎಂದು ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕ್ರೊಟಲಾರಿಯ ಜನ್ಸಿಯ’ ಸೆಣಬಿನ ಸಸ್ಯ ಶಾಸ್ತ್ರೀಯ ಹೆಸರು. ಇದು ಫ್ಯಾಬೇಸಿಯೆ ಸಸ್ಯ ಕುಟುಂಬಕ್ಕೆ ಸೇರಿದ ಒಂದು ನಾರಿನ ಗಿಡ. ಇದರ ನಾರನ್ನು ಹಗ್ಗ, ಮೀನು ಬಲೆ, ಗೋಣಿ ಚೀಲ, ಚಾಪೆ ಇತ್ಯಾದಿಗಳನ್ನು ತಯಾರಿಸಲು ಬಳಸುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಗಿಡ ಜೈವಿಕ ಸಾರಜನಕ ಸ್ಥಿರೀಕರಣ ಕ್ರಿಯೆಗೆ ಸಹಕಾರಿಯಾಗಿದೆ’ ಎಂದು ಜೀವ ವಿಜ್ಞಾನ ಉಪನ್ಯಾಸಕಿ ಸಿ.ಚೈತ್ರ ತಿಳಿಸಿದರು.

ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಹಸಿರು ಸೊಪ್ಪನ್ನು ತಂದು ತಿಪ್ಪೆಗೆ ಹಾಕಿ ಮಣ್ಣು ಮುಚ್ಚುತ್ತಿದ್ದರು. ಅದು ಕೊಳೆತು ಸಾವಯವ ಗೊಬ್ಬರವಾಗುತ್ತಿತ್ತು. ಅದನ್ನು ಗಾಡಿಯಲ್ಲಿ ಹೊಲ, ಗದ್ದೆಗಳಿಗೆ ಸಾಗಿಸಿ ಹರಡುತ್ತಿದ್ದರು. ಯಾವುದೇ ರಾಸಾಯನಿಕ ಗೊಬ್ಬರದ ಬಳಕೆಇಲ್ಲದೆಯೇ ಬೆಳೆ ಬೆಳೆಯುತ್ತಿತ್ತು. ಆರೋಗ್ಯಕ್ಕೆ ಪೂರಕವಾದ ದವಸ ಧಾನ್ಯ ಕಣಜ ಸೇರುತ್ತಿತ್ತು. ಬದಲಾದ ಪರಿಸ್ಥಿತಿಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಹೆಚ್ಚಿದಂತೆ, ಸಾಂಪ್ರದಾಯಿಕ ವಿಧಾನದಲ್ಲಿ ಗೊಬ್ಬರ ತಯಾರಿಸುವುದು ಅಪರೂಪವಾಯಿತು.

ಆದರೆ ಈಗ ಸಾಂಪ್ರದಾಯಿಕ ಬೇಸಾಯವನ್ನು ವೈಜ್ಞಾನಿಕ ಪದ್ಧತಿಯ ಮೂಲಕ ಅಳವಡಿಸಲಾಗುತ್ತಿದೆ. ಮಾವಿನ ತೋಟಗಳಲ್ಲಿ ಸೆಣಬು ಬೆಳೆಯುತ್ತಿರುವುದು ಅದರ ಒಂದು ಭಾಗವಾಗಿದೆ.

ಬೀಜ ಬರುವ ಮುನ್ನವೇ ಭೂಮಿಗೆ

ಸನ್‌ ಹೆಂಪ್‌ ಅವರೆ ಜಾತಿಗೆ ಸೇರಿದ ಸಸ್ಯವಾಗಿದ್ದು, ಇದರ ಬೇರಿನಲ್ಲಿರುವ ಬ್ಯಾಕ್ಟೀರಿಯ ಸಸ್ಯಗಳಿಗೆ ನೈಸರ್ಗಿಕವಾಗಿ ಸಾರಜನಕ ಒದಗಿಸುತ್ತದೆ. ಇದರ ದಟ್ಟವಾದ ನೆರಳು ಜಮೀನಿನಲ್ಲಿ ಕಳೆ ಬೆಳೆಯುವುದನ್ನು ನೀಯಂತ್ರಿಸುತ್ತದೆ. ‘ಸನ್‌ ಹೆಂಪ್‌ ಸಸ್ಯವನ್ನು ಹೂ ಬಿಡುವ ಹಂತದಲ್ಲಿಯೇ ಕತ್ತರಿಸಿ ಮಣ್ಣಿಗೆ ಸೇರಿಸಬೇಕು. ಇದರ ಬೀಜ ವಿಷಕಾರಿಯಾಗಿದ್ದು, ಜಾನುವಾರು ನೇರವಾಗಿ ಸೇವಿಸಿದಲ್ಲಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬೀಜ ಬರುವ ಮುನ್ನವೇ ಅದನ್ನು ಭೂಮಿ ಪಾಲು ಮಾಡುವುದು ಕ್ಷೇಮಕರ’ ಎನ್ನುತ್ತಾರೆ ಸಸ್ಯ ಶಾಸ್ತ್ರಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.