ಮುಳಬಾಗಿಲು: ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಸೂಕ್ತ ಸಮಯಕ್ಕೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ರಾಮಚಂದ್ರ ಅವರಿಗೆ ಮನವಿ ಸಲ್ಲಿಸಿತು.
ಪದವೀಧರ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿ, ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ತಾಲ್ಲೂಕಿನಲ್ಲಿರುವ ಹೆಚ್ಚುವರಿ ಶಿಕ್ಷಕರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು ಎಂದರು.
ಕ್ಷೀರ ಭಾಗ್ಯ ಯೋಜನೆಯಂತೆ ಮೊಟ್ಟೆ ಹಾಗೂ ಬಾಳೆಹಣ್ಣುಗಳನ್ನು ಶಾಲೆಗೆ ಸರಬರಾಜು ಮಾಡುವ ಜೊತೆಗೆ ಶಾಲಾ ಅನುದಾನಗಳನ್ನು ಸಕಾಲಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರು ಪಾಠದ ಜೊತೆಗೆ ಬಿಸಿಯೂಟ ಹಾಗೂ ಸಮವಸ್ತ್ರ ಮತ್ತಿತರರ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದು, ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಮಯದ ಅಭಾವ ಕಾಡುತ್ತಿದೆ. ಹೀಗಾಗಿ ಶಿಕ್ಷಕರಿಗೆ ಶೈಕ್ಷಣಿಕ ವಿಚಾರಗಳಲ್ಲಿ ಹೆಚ್ಚು ಸಮಯ ಕಳೆಯುವಂತೆ ಇಲಾಖೆ ಯೋಜನೆ ಹಮ್ಮಿಕೊಳ್ಳಬೇಕು ಎಂದರು.
ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ರಾಮಚಂದ್ರಪ್ಪ, ಈ ಕುರಿತು ಪರಿಶೀಲಿಸಲಾಗುವುದು ಎಂದರು.
ಎಂ.ಶಿವಣ್ಣ, ಬಿ.ಎಂ.ಶಂಕರಪ್ಪ, ಗಾಯತ್ರಿ ದೇವಿ, ಕೆ. ರಾಜೇಶ್ವರಿ, ಸವಿತ, ಸುಶೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.