ADVERTISEMENT

ಬಾಲಕನ ಶಸ್ತ್ರಚಿಕಿತ್ಸೆಗೆ ಸಹಾಯಹಸ್ತಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 15:43 IST
Last Updated 22 ಮಾರ್ಚ್ 2022, 15:43 IST

ಕೋಲಾರ: ‘ಮಗ ಶಕ್ತಿ ವರುಣ್‌ಗೆ (6) ಎ ಪ್ಲಾಸ್ಟಿಕ್ ಅನಿಮಿಯಾ ಎಂಬ ಕಾಯಿಲೆಯಿದ್ದು, ನಾರಾಯಣ ಹೃದಯಾಲಯದಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಶಸ್ತ್ರಚಿಕಿತ್ಸೆಗೆ ₹ 32 ಲಕ್ಷ ಖರ್ಚಾಗಲಿದ್ದು, ದಾನಿಗಳು ಸಹಾಯ ಮಾಡಬೇಕು’ ಎಂದು ಕೆಜಿಎಫ್‌ನ ವಿಜಯ್ ಹಾಗೂ ಆಶಾ ದಂಪತಿ ಮನವಿ ಮಾಡಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾವು ಬೀದಿ ಬದಿಯಲ್ಲಿ ತರಕಾರಿ ವ್ಯಾಪಾರ ಮಾಡಿ ಬಡತನದಲ್ಲಿ ಜೀವನ ಸಾಗಿಸುತ್ತಿದ್ದೇವೆ. ನಮ್ಮ ಒಬ್ಬನೇ ಮಗ ಶಕ್ತಿ ವರುಣ್‌ಗೆ 2021ರ ಡಿಸೆಂಬರ್‌ನಲ್ಲಿ ಎ ಪ್ಲಾಸ್ಟಿಕ್ ಅನಿಮಿಯಾ ಬಂದಿದೆ’ ಎಂದು ವಿಜಯ್‌ ತಿಳಿಸಿದರು.

‘ಹೆಚ್ಚಿನ ಚಿಕಿತ್ಸೆಗಾಗಿ ಮಗನನ್ನು ಬೆಂಗಳೂರಿನ ಇಂದಿರಾ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದೆವು. ಅಲ್ಲಿನ ವೈದ್ಯರು ನಾರಾಯಣ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾನ್ಟ್ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸೂಚಿಸಿದ್ದಾರೆ. ಆದರೆ, ಮಗನ ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೆ ಸಮಸ್ಯೆಗೆ ಸಿಲುಕಿದ್ದೇವೆ’ ಎಂದು ಹೇಳಿದರು.

ADVERTISEMENT

‘ಪ್ರತಿ 4 ದಿನಕ್ಕೊಮ್ಮೆ ₹ 11,500 ಖರ್ಚು ಮಾಡಿ ರಕ್ತದ ಪ್ಲೇಟ್ ಲೆಟ್‌ ಬದಲಾಯಿಸುತ್ತಾ ಮಗನನ್ನು ಉಳಿಸಿಕೊಂಡಿದ್ದೇವೆ. ಮಗನಿಗೆ 10 ದಿನದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸದಿದ್ದರೆ ಜೀವಕ್ಕೆ ಅಪಾಯ ಇರುವುದಾಗಿ ವೈದ್ಯರು ತಿಳಿಸಿದ್ದಾರೆ. ನಮಗೆ ದಿಕ್ಕು ತೋಚದಂತಾಗಿದ್ದು, ದಾನಿಗಳು ಸಹಾಯಹಸ್ತ ಚಾಚಿ ಮಗನನ್ನು ಉಳಿಸಿ ಕೊಡಬೇಕು' ಎಂದು ಕೋರಿದರು.

‘ಹಣಕಾಸು ನೆರವು ನೀಡಲು ಇಚ್ಛಿಸುವವರು 9964477882 ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದರೆ ಭೇಟಿ ಮಾಡುತ್ತೇವೆ. ದಾನಿಗಳು ಕೆಜಿಎಫ್‌ನ ಕರೂರು ವೈಶ್ಯ ಬ್ಯಾಂಕ್‍ನಲ್ಲಿನ ತಮ್ಮ ಉಳಿತಾಯ ಖಾತೆ ಸಂಖ್ಯೆ 1306155000159929, ಐಎಫ್‌ಎಸ್‌ಸಿ ಸಂಖ್ಯೆ– KVBL0001306ಕ್ಕೆ ಹಣ ಸಂದಾಯ ಮಾಡಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.