ADVERTISEMENT

ಅಯೋಧ್ಯೆ ತೀರ್ಪು: ಕೋಮುಗಲಭೆಗೆ ಸಂಚು

ಪ್ರಗತಿಪರ ಮುಖಂಡರ ಸಭೆಯಲ್ಲಿ ಕೆಪಿಆರ್‌ಎಸ್‌ ಅಧ್ಯಕ್ಷ ಬಯ್ಯಾರೆಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 15:16 IST
Last Updated 8 ನವೆಂಬರ್ 2019, 15:16 IST
ಕೋಲಾರದಲ್ಲಿ ಶುಕ್ರವಾರ ನಡೆದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಕೆಪಿಆರ್‌ಎಸ್‌ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಮಾತನಾಡಿದರು.
ಕೋಲಾರದಲ್ಲಿ ಶುಕ್ರವಾರ ನಡೆದ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಕೆಪಿಆರ್‌ಎಸ್‌ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಮಾತನಾಡಿದರು.   

ಕೋಲಾರ: ‘ಕೋಮುವಾದಿ ಶಕ್ತಿಗಳು ಅಯೋಧ್ಯೆ ನಿವೇಶನ ವಿವಾದದ ತೀರ್ಪನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಗಲಭೆ ಸೃಷ್ಟಿಸಲು ಸಂಚು ಮಾಡಿದ್ದು, ಇದಕ್ಕೆ ಅವಕಾಶ ನೀಡಬಾರದು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಹೇಳಿದರು.

ಕೋಮು ಸೌಹಾರ್ದ ವೇದಿಕೆಯು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿಪರ ಮುಖಂಡರ ಸಭೆಯಲ್ಲಿ ಮಾತನಾಡಿ, ‘ದೇಶದಲ್ಲಿ ಕೋಮುಗಲಭೆ ಸೃಷ್ಟಿಸಿ ಧರ್ಮಗಳನ್ನು ಹೊಡೆಯುವ ಸಂಚು ನಿರಂತರವಾಗಿ ನಡೆಯುತ್ತಿದೆ. ಕೋಮುವಾದಿ ಪಕ್ಷಗಳಿಗೆ ಎಂದಿಗೂ ಬೆಂಬಲ ನೀಡಬಾರದು’ ಎಂದು ತಿಳಿಸಿದರು.

‘ಕೋಮುಗಲಭೆ ಸೃಷ್ಟಿಸುವವರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಪ್ರಗತಿಪರ ಸಂಘಟನೆಗಳ ಮುಖಂಡರು ಕೋಮು ಶಕ್ತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕು. ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡದಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಅಯೋಧ್ಯೆ ವಿವಾದ ಸಂಬಂಧ ನ್ಯಾಯಾಲಯದಲ್ಲಿ ಹಲವು ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು, ಸದ್ಯದಲ್ಲೇ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ. ಕೆಲ ಪಕ್ಷಗಳು ನ್ಯಾಯಾಲಯದ ತೀರ್ಪನ್ನೇ ನೆಪ ಮಾಡಿಕೊಂಡು ರಾಜಕೀಯ ಲಾಭ ಪಡೆಯಲು ಹವಣಿಸುತ್ತಿವೆ. ಮತ್ತೊಂದು ಕಡೆ ಸಮಾಜದಲ್ಲಿ ಶಾಂತಿ ಕದಡುವ ಸಂಚು ನಡೆಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಅಯೋಧ್ಯೆ ವಿವಾದ ಸಂಬಂಧ ಯಾವುದೇ ಧರ್ಮದ ಪರ ತೀರ್ಪು ಬಂದರೂ ನಗರ, ಪಟ್ಟಣ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲಿ ಶಾಂತಿ, ಸಾಮರಸ್ಯದ ವಾತಾವರಣ ಸೃಷ್ಟಿಸಲು ಜಾಗೃತಿ ಅಭಿಯಾನ ನಡೆಸಬೇಕು. ಈ ನಿಟ್ಟಿನಲ್ಲಿ ಕೋಮು ಸೌಹರ್ದ ವೇದಿಕೆಯಿಂದ ಸಾರ್ವಜನಿಕರಿಗೆ ಕರಪತ್ರ ವಿತರಣೆ, ನ.13ರಂದು ಜಾಗೃತಿ ನಡಿಗೆ ನಡೆಸಲು ನಿರ್ಧರಿಸಿದ್ದು, ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಕೋರಿದರು.

ಹುನ್ನಾರ ನಡೆಯುತ್ತಿದೆ: ‘ದೇಶದ ಜನಸಂಖ್ಯೆಯಲ್ಲಿ ಶೇ 65ರಷ್ಟು ಯುವಕ ಯುವತಿಯರಿದ್ದು, ಇವರ ಮನಸ್ಸನ್ನು ಏಕ ದಿಕ್ಕಿನಡೆ ಸೆಳೆದು ಕೋಮುಗಲಭೆ ಸೃಷ್ಟಿಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದು ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ಕಳವಳ ವ್ಯಕ್ತಪಡಿಸಿದರು.

‘ರಾಮಮಂದಿರ ಮತ್ತು ಬಾಬರಿ ಮಸೀದಿ ನಿರ್ಮಿಸುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ಸಹ ನಡೆಯುತ್ತಿದೆ. ಯಾವುದು ಸರಿ, ಯಾವುದು ತಪ್ಪು ಎನ್ನದೆ ಯುವಕ ಯುವತಿಯರ ಮನಸ್ಸು ಮಲೀನಗೊಳಿಸುವ ಕುಕೃತ್ಯ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಧರ್ಮವು ಎರಡು ರೀತಿಯಲ್ಲಿದೆ. ನಿಜವಾದ ಧರ್ಮವು ಹೊರಗಡೆ ಬರದೆ ಬುದ್ಧನ ದೀಪದ ರೀತಿಯಲ್ಲಿ ಇರುತ್ತದೆ. ಇನ್ನೊಂದು ರಾಜಕಾರಣದ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸುತ್ತಿದೆ’ ಎಂದು ಸರ್ಕಾರಿ ಮಹಿಳಾ ಕಾಲೇಜು ಉಪನ್ಯಾಸಕ ಪ್ರೊ.ಜಿ.ಶಿವಪ್ಪ ಅರಿವು ಅಭಿಪ್ರಾಯಪಟ್ಟರು.

ಪ್ರಗತಿಪರ ಸಂಘಟನೆಗಳ ಮುಖಂಡರಾದ ಎ.ನಳಿನಿ, ಶಿವಪ್ಪ, ನಾಗರಾಜ್, ಸದಾನಂದ, ವೆಂಕಟಸ್ವಾಮಿ, ಟಿ.ಎಂ.ವೆಂಕಟೇಶ್, ಅಂಬರೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.