ಬಂಗಾರಪೇಟೆ: ತಾಲ್ಲೂಕಿನ ವಿವಿಧೆಡೆ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೂದಿಕೋಟೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮಾಲೂರು ತಾಲ್ಲೂಕಿನ ಲೋಕೇಶ್ (18), ಹೊಸಕೋಟೆ ತಾಲ್ಲೂಕಿನ ಯಲ್ಲಪ್ಪ (35) ಮತ್ತು ಬೂದಿಕೋಟೆಯ ದರ್ಶನ್ (18) ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ವಿಚಾರಣೆ ವೇಳೆ ತಾವು ಎರಡು ದ್ವಿಚಕ್ರ ವಾಹನ, ಕಬ್ಬಿಣದ ಕಂಬಿಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಗಳಿಂದ ₹85 ಸಾವಿರ ಮೌಲ್ಯದ ಎರಡು ದ್ವಿಚಕ್ರ ವಾಹನಗಳು, ಕಬ್ಬಿಣದ ಕಂಬಿ, ನಗದು ಮತ್ತು ಕಳ್ಳತನಕ್ಕಾಗಿ ಬಳಸಲಾಗಿದ್ದ 2 ಲಕ್ಷ ಮೌಲ್ಯದ ಟಾಟಾ ಏಸ್ ಮತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಲ್ಲೂಕಿನ ಬೂದಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜುಂಜನಹಳ್ಳಿ ಗ್ರಾಮದ ನಿವಾಸಿ ಗಂಗಪ್ಪ ಎಂಬುವರು ಜೂನ್ 21ರಂದು ಕುರಿಗಳನ್ನು ಮಾರಾಟ ಮಾಡಿ, ಬೂದಿಕೋಟೆಯಿಂದ ಕಾರಮಾನಹಳ್ಳಿ ಮಾರ್ಗವಾಗಿ ನಡೆದುಕಂಡು ಹೋಗುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಊರಿಗೆ ಬಿಡುವುದಾಗಿ, ಪುಸಲಾಯಿಸಿ ಹತ್ತಿಸಿಕೊಂಡರು. ಆದರೆ, ಮಾರ್ಗಮಧ್ಯೆ ನೀಲಗಿರಿ ತೋಪಿಗೆ ಕರೆದೊಯ್ದು, ಬೆದರಿಕೆ ಹಾಗಿ 17 ಸಾವಿರ ನಗದು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದರು.
ಕಾರ್ಯಾಚರಣೆಯಲ್ಲಿ ಬೂದಿಕೋಟೆ ಪೊಲೀಸ್ ಠಾಣೆ ಪ್ರಭಾರ ಪಿಎಸ್ಐ ಕಿರಣ್ ಕುಮಾರ್, ಸಿಬ್ಬಂದಿ ಮಂಜುನಾಥರೆಡ್ಡಿ, ಅಮರೇಶ್, ಎನ್.ವಿ.ಚಂದ್ರಶೇಖರ್, ಕೆ.ಎಂ.ಮಂಜುನಾಥ, ಬಿ.ಆರ್.ಮಂಜುನಾಥ ಮತ್ತು ಉಮೇಶ್ ಅವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.