ADVERTISEMENT

ಬೌದ್ಧಿಕ ಮನಸ್ಸುಗಳ ಹರಿವ ನದಿಗಳಾಂತಗಲಿ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮುನಿವೆಂಕಟಪ್ಪ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 14:33 IST
Last Updated 27 ಜನವರಿ 2021, 14:33 IST
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಿ.ಮುನಿವೆಂಕಟಪ್ಪ ಅಧ್ಯಕ್ಷೀಯ ಭಾಷಣ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಿ.ಮುನಿವೆಂಕಟಪ್ಪ ಅಧ್ಯಕ್ಷೀಯ ಭಾಷಣ ಮಾಡಿದರು.   

ಕೋಲಾರ: ‘ಭಾರತದಲ್ಲಿ ಇರುವವರೆಲ್ಲರೂ ಭಾರತೀಯರೇ. ಸ್ಪೃಶ್ಯ ಭಾರತ, ಅಸ್ಪೃಶ್ಯ ಭಾರತವೆಂಬ ವಿಭಜನೆ ಸಲ್ಲದು. ಎಡಗೈ–ಬಲಗೈ ಭಾರತ ನಿವಾರಣೆಯಾದರೆ ಮಾತ್ರ ಬಹುಜನ ಐಕ್ಯತೆಯ ಮಹಾಭಾರತ, ಭವ್ಯ ಭಾರತ ನಿರ್ಮಾಣ ಸಾಧ್ಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಿ.ಮುನಿವೆಂಕಟಪ್ಪ ಪ್ರತಿಪಾದಿಸಿದರು.

ಇಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ‘ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಸೇರಿದಂತೆ ಎಲ್ಲಾ ಜಾತಿಯ ಬಡವರಿಗೂ ಮೀಸಲಾತಿ ದೊರೆಯಲಿ. ಮೀಸಲಾತಿಯಿಂದ ಎಲ್ಲಾ ಜಾತಿಗಳಿಗೂ ಅನುಕೂಲವಾಗಲಿ. ಇರುವುದನ್ನು ಹಂಚುವುದು ಸೂಕ್ತವೇ ಹೊರತು, ಇನ್ನೊಬ್ಬರಿಂದ ಕಿತ್ತುಕೊಳ್ಳುವುದು ಅಥವಾ ಕಿತ್ತು ಕೊಡುವುದು ಸಲ್ಲದು’ ಎಂದು ಅಭಿಪ್ರಾಯಪಟ್ಟರು.

‘ಭಾರತ ವಿರೋಧಿ ಸರ್ವಾಧಿಕಾರವು ತನ್ನ ಎಲ್ಲೆ ದಾಟಿದರೆ ಈ ನೆಲದಲ್ಲಿ ಮತ್ತೊಂದು ಮಹಾ ಸಂಗ್ರಾಮ ನಡೆಯವುದರಲ್ಲಿ ಸಂಶಯವಿಲ್ಲ. ದೇಶವು ಬೌದ್ಧಿಕ ಮನಸ್ಸುಗಳ ಹಳ್ಳ ದಾಟಿ ಹರಿವ ನದಿಗಳಾಂತಗಲಿ. ದೇಶದ ರಾಜಕಾರಣಿಗಳು ಪ್ರಬುದ್ಧರೂ, ಪ್ರಾಮಾಣಿಕರೂ, ಪ್ರಜಾಕಾರಣಿಗಳೂ ಆಗಲಿ’ ಎಂದು ಆಶಿಸಿದರು.

ADVERTISEMENT

‘ಬುದ್ಧರು ಶ್ರೇಣೀಕೃತ ಸಮಾಜ ತಿರಸ್ಕರಿಸುವ ಮೂಲಕ ಸತ್ಯದ ಪ್ರತಿಪಾದನೆ ಮಾಡಿದರು. ಪ್ರತಿ ಮನೆಯೂ ಬುದ್ಧವಿಹಾರ ಆಗಬೇಕು. ಮೌಢ್ಯ ಸಂಸ್ಕೃತಿಗೆ ಬದಲಾಗಿ ಪಂಚಶೀಲ ಅಷ್ಟಾಂಗ ಮಾರ್ಗವು ಪ್ರತಿಯೊಬ್ಬರ ಮನೆ ಮನದಲ್ಲಿ ಸ್ಥಾಪನೆಯಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಬುದ್ಧತ್ವದ ಮುಂದಿನ ತಿರುಳು ಬಸವಣ್ಣ ಮತ್ತು ಶರಣರು, ಬುದ್ಧನು ದೇವರ ವಿಚಾರದಲ್ಲಿ ಮೌನವಾಗಿ ತಿರಸ್ಕರಿಸಿದರೆ, ಬಸವಾದಿ ಶರಣರು ದೇವಾಲಯದ ದೇವರನ್ನು ತಮ್ಮ ಕರಸ್ಥಲದಲ್ಲೇ ಕಂಡುಕೊಂಡರು. ಅನುಭವ ಮಂಟಪದ ಮೂಲಕ ಶಾಸನ ಸಭೆ, ಲೋಕಸಭೆ ಸ್ಥಾಪನೆಗೆ ಕಾರಣಕರ್ತರಾದರು’ ಎಂದರು.

ಶೋಷಿತರಿಗೆ ವಿಮೋಚನೆ: ‘ಇಂದಿನ ಸಂಸತ್, ಲೋಕಸಭೆಯು ಬಸವಣ್ಣನವರ ಅನುಭವ ಮಂಟಪದ ಬೇರುಗಳು. ಬಸವಣ್ಣ ಸಮಾನತೆ ಪ್ರತಿಪಾದಿಸಿದರು. ಈಗ ನಾವು ಬುದ್ಧ, ಬಸವಣ್ಣರನ್ನು ಮರೆತಿದ್ದೇವೆ. ನಮ್ಮ ಮುಂದೆ ಅಂಬೇಡ್ಕರ್ ಮಾತ್ರ ಇದ್ದಾರೆ. ಆದರೆ, ಅಂಬೇಡ್ಕರ್ ರಚಿಸಿದ ಸಂವಿಧಾನದ ಬಗ್ಗೆ ಅಪಸ್ವರ ಎತ್ತಲಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದಲೇ ದೇಶದಲ್ಲಿ ಶೋಷಿತರಿಗೆ ವಿಮೋಚನೆ ದೊರೆತಿದೆ. ಆದರೆ, ನಾವು ಎಷ್ಟು ಜನ ಸಂವಿಧಾನ ಮತ್ತು ಅಂಬೇಡ್ಕರ್‌ ಮೂರ್ತಿಯನ್ನು ಮನೆ ಮನದಲ್ಲಿ ಇಟ್ಟುಕೊಂಡಿದ್ದೇವೆ?  ಸಂವಿಧಾನವನ್ನೂ ಬಿಟ್ಟರೆ ದೇಶಕ್ಕೆ ಉಳಿಗಾಲವಿಲ್ಲ. ನಮಗೆ ಪುರಾಣ ಕಲ್ಪಿತ ಪಾತ್ರಗಳು ಆದರ್ಶವಾಗಬಾರದು. ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಆದರ್ಶಪ್ರಾಯರಾಗಬೇಕು’ ಎಂದು ತಿಳಿಸಿದರು.

ಒತ್ತಡ ಹೇರಬೇಕು: ‘ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಆದರೆ, ಸ್ವಾಯತ್ತತೆ ಅನುದಾನ ಸಿಕ್ಕಿಲ್ಲ. ಜನಪ್ರತಿನಿಧಿಗಳು ಅದರಲ್ಲೂ ರಾಜ್ಯದ ಸಂಸದರು ಕನ್ನಡ ಶಾಸ್ತ್ರೀಯ ಸ್ಥಾನಮಾನದ ಜತೆಗೆ ಸ್ವಾಯತ್ತತೆಗೆ ಪ್ರಯತ್ನಿಸಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ತಾಲ್ಲೂಕು ಕಚೇರಿಯಲ್ಲಿ ಲಂಚ ಕೊಡದಿದ್ದರೆ ಕಡತ ಮುಂದಕ್ಕೆ ಹೋಗುವುದಿಲ್ಲ. ಜನಪ್ರತಿನಿಧಿಗಳ ಮಟ್ಟದಲ್ಲಿ ಆಗಿರುವ ಕೆಲಸ ಅಧಿಕಾರಿಗಳ ಮಟ್ಟದಲ್ಲಿ ಆಗುತ್ತಿಲ್ಲ. ಅಧಿಕಾರಿ ವರ್ಗ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.