ADVERTISEMENT

ಬಿಜೆಪಿ ಕೋಮುವಾದ ಪ್ರಚೋದಿಸುತ್ತಿದೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 12:53 IST
Last Updated 11 ಏಪ್ರಿಲ್ 2019, 12:53 IST

ಕೋಲಾರ: ‘ಕೋಮುವಾದಿಗಳನ್ನು ಸೋಲಿಸಿ ಜಾತ್ಯತೀತ ಶಕ್ತಿಗಳನ್ನು ಗೆಲ್ಲಿಸುವ ಉದ್ದೇಶಕ್ಕೆ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳನ್ನು ಬೆಂಬಲಿಸಲಾಗುತ್ತದೆ’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎನ್.ಮೂರ್ತಿ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಮುವಾದಿ ಬಿಜೆಪಿಯನ್ನು ಸೋಲಿಸಲು 100ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳ ಸದಸ್ಯರು ಒಕ್ಕೂಟ ರಚಿಸಿಕೊಂಡು ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ’ ಎಂದರು.

‘ಆರ್‌ಎಸ್‍ಎಸ್ ಮತ್ತು ಸಂಘ ಪರಿವಾರದ ಸಹ ಸಂಸ್ಥೆಯಾದ ಬಿಜೆಪಿಯು ಜಾತೀಯತೆ, ಕೋಮುವಾದ ಪ್ರಚೋದಿಸುತ್ತಿದೆ. ಆರ್‌ಎಸ್‍ಎಸ್ ಮತ್ತು ಸಂಘ ಪರಿವಾರದವರು ತಮ್ಮ ಅಜೆಂಡಾ ಅನುಷ್ಠಾನಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಮೋದಿ 5 ವರ್ಷಗಳ ಆಳ್ವಿಕೆಯಲ್ಲಿ ದೇಶಕ್ಕೆ ಒಳ್ಳೆಯದು ಮಾಡಿಲ್ಲ, ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಅನ್ನಭಾಗ್ಯ ನೀಡಿದೆ. ಆದರೆ, ಮೋದಿಯವರು ಅಂಬಾನಿ, ನೀರವ್ ಮೋದಿಯಂತಹ ಬಂಡವಾಳಶಾಹಿಗಳಿಗೆ ಸಾಲ ನೀಡಿ ದೇಶ ಬಿಟ್ಟು ಹೋಗಲು ಸಹಕರಿಸಿದ್ದಾರೆ. ಬಿಜೆಪಿಯದು ಬಂಡವಾಳಶಾಹಿಗಳ ಪರವಾದ ನೀತಿ’ ಎಂದು ಕಿಡಿಕಾರಿದರು.

‘ಮೋದಿ ಆಳ್ವಿಕೆಯಲ್ಲಿ ದೇಶದೆಲ್ಲೆಡೆ ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಗುವ ಮತ್ತು ಮೀಸಲಾತಿ ರದ್ದಾಗುವ ಆತಂಕವಿದೆ. ಹೀಗಾಗಿ ಸಂಘಟನೆಯು ಕೋಲಾರ ಸೇರಿದಂತೆ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ’ ಎಂದು ಸ್ಪಷ್ಟಪಡಿಸಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್, ಸದಸ್ಯರಾದ ಬೈಲಹೊನ್ನಯ್ಯ, ಕೋದಂಡರಾಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.