ADVERTISEMENT

ಗೋಡಂಬಿ ಬರಡು ಭೂಮಿಯ ಬಂಗಾರದ ಕಣಜ

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿ.ವಿ ಆಡಳಿತ ಮಂಡಳಿ ಸದಸ್ಯ ಮಂಜುನಾಥಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 14:09 IST
Last Updated 13 ಮಾರ್ಚ್ 2020, 14:09 IST
ಕೋಲಾರದಲ್ಲಿ ಶುಕ್ರವಾರ ನಡೆದ ಗೋಡಂಬಿ ಕೃಷಿ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ರೈತರು ಪಾಲ್ಗೊಂಡರು.
ಕೋಲಾರದಲ್ಲಿ ಶುಕ್ರವಾರ ನಡೆದ ಗೋಡಂಬಿ ಕೃಷಿ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ರೈತರು ಪಾಲ್ಗೊಂಡರು.   

ಕೋಲಾರ: ‘ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ಪರ್ಯಾಯ ಬೆಳೆಯಾಗಿ ಗೋಡಂಬಿ ಬೆಳೆಯಬಹುದು. ಗೋಡಂಬಿಯು ಬರಡು ಭೂಮಿಯ ಬಂಗಾರದ ಕಣಜ’ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಎಸ್.ಎನ್.ಮಂಜುನಾಥಗೌಡ ಹೇಳಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಮಹಾವಿದ್ಯಾಲಯ, ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಹಾಗೂ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸುಸ್ಥಿರ ಗೋಡಂಬಿ ಕೃಷಿ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಂತರ್ಜಲ ಕುಸಿದಿರುವ ಜಿಲ್ಲೆಯಲ್ಲಿ ನಿರಂತರವಾಗಿ ಬರ ಕಾಡುತ್ತಿದೆ. ಹಿಂದೆ ರೈತರು ಬದುಗಳಲ್ಲಿ ಗೋಡಂಬಿ ಬೆಳೆಯುತ್ತಿದ್ದರು. ತೋಟಗಾರಿಕೆ ಬೆಳೆಗಳಿಗೆ ವಲಸೆ ಹೋದ ನಂತರ ಮಾವು, ತರಕಾರಿ ಬೆಳೆಗೆ ಒತ್ತು ನೀಡಿದರು. ಇತ್ತೀಚೆಗೆ ಸೂಕ್ತ ಬೆಳೆ, ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಗೋಡಂಬಿಯನ್ನು ಪರ್ಯಾಯ ಬೆಳೆಯಾಗಿ ರೈತರಿಗೆ ಪರಿಚಯಿಸುವ ಉದ್ದೇಶಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಬಹುವಾರ್ಷಿಕ ಬೆಳೆಯಾದ ಗೋಡಂಬಿಯು ಹೆಚ್ಚು ಲಾಭದಾಯಕ ಮತ್ತು ಜಿಲ್ಲೆಯ ವಾತಾವರಣಕ್ಕೆ ಪೂರಕ. ಜತೆಗೆ ಈ ಬೆಳೆಯಿಂದ ಅಂತರ್ಜಲ ಸಂರಕ್ಷಣೆಯಾಗಲಿದೆ. ನಾಟಿ ಮಾಡಿದ 3ನೇ ವರ್ಷದಿಂದ ಫಸಲು ದೊರೆಯುತ್ತದೆ’ ಎಂದು ಮಾಹಿತಿ ನೀಡಿದರು.

ವಾಣಿಜ್ಯ ಬೆಳೆ

‘ಪಶ್ಚಿಮ ಘಟ್ಟದಲ್ಲಿ ಮಣ್ಣಿನ ಸವಕಳಿ ತಡೆಯಲು ರೈತರು ಗೇರು ಗಿಡ ಬೆಳೆಯಲಾರಂಭಿಸಿದರು. ಇಂದು ಗೋಡಂಬಿ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದರಲ್ಲಿರುವ ಪೌಷ್ಠಿಕಾಂಶಗಳೇ ಇದಕ್ಕೆ ಕಾರಣ. ಅಚ್ಚುಮೆಚ್ಚಿನ ಆಹಾರ ಪದಾರ್ಥಗಳಲ್ಲಿ ಗೋಡಂಬಿ ಒಂದಾಗಿದೆ’ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ವೈ.ಕೋಟಿಕಲ್ ಹೇಳಿದರು.

‘ಗೇರು ಗಿಡ ನೆಟ್ಟ ನಂತರ ಫಸಲು ಬರಲು ಮೂರ್ನಾಲ್ಕು ವರ್ಷ ತೆಗೆದುಕೊಳ್ಳುವುದರಿಂದ ಈ ಅವಧಿಯಲ್ಲಿ ಅಂತರ ಬೆಳೆಯಾಗಿ ತರಕಾರಿ ಕೃಷಿ ಮಾಡಬಹುದು. ಈ ಮೂಲಕ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಕೇಂದ್ರದ ಗುರಿ ತಲುಪಲು ಸಾಧ್ಯ. ಗೋಡಂಬಿ ಹಣ್ಣನ್ನು ಸಂಸ್ಕರಿಸಿ ಮೌಲ್ಯವರ್ಧಿತ ಉತ್ಪನ್ನ ಮಾಡಲು ಅವಕಾಶವಿರುವ ತಂತ್ರಜ್ಞಾನ ಬಳಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ಉತ್ಪಾದನೆಗೆ ಒತ್ತು

‘ನಿರ್ದೇಶನಾಲಯವು ಗೋಡಂಬಿ ಸಸ್ಯ ಉತ್ಪಾದನೆಗೆ ಒತ್ತು ನೀಡುತ್ತಿದೆ. ಗುಣಮಟ್ಟದ ಮಾನ್ಯತೆ ಪಡೆದ ನರ್ಸರಿಗಳಿಂದ ಮಾತ್ರ ಸಸಿ ಪಡೆಯಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಉತ್ಪಾದನಾ ವಲಯಗಳ ಅಭಿವೃದ್ಧಿಗೆ ಒತ್ತು ನೀಡುತ್ತಿವೆ. 3 ತಿಂಗಳಿಗೊಮ್ಮೆ ವಿಚಾರ ಸಂಕಿರಣ ನಡೆಸಿ ಮತ್ತು ತಂತ್ರಜ್ಞಾನದ ಪ್ರಚಾರ ಮಾಡಿ ರೈತರಿಗೆ ಅರಿವು ಮೂಡಿಸಲಾಗುತ್ತಿದೆ’ ಎಂದು ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ದಾದಾ ಸಾಹೇಬ್ ದೇಸಾಯಿ ಹೇಳಿದರು.

‘ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋಡಂಬಿ ಬೆಳೆಯಲಾಗುತ್ತದೆ. ಕ್ಷೇತ್ರ ವಿಸ್ತರಣೆ ಕಾರ್ಯಕ್ರಮದಡಿ ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ ಜಿಲ್ಲೆಯಲ್ಲೂ ಗೋಡಂಬಿ ಬೆಳೆಗೆ ಒತ್ತು ನೀಡಲಾಗುವುದು. ಸಾಂಪ್ರದಾಯಿಕ ಪ್ರದೇಶವಲ್ಲದ ಮೈಸೂರು, ಹಾಸನ, ಧಾರವಾಡ ಜಿಲ್ಲೆಗಳಿಗೂ ಗೋಡಂಬಿ ಬೆಳೆ ಲಗ್ಗೆಯಿಡುತ್ತಿದೆ’ ಎಂದು ತಿಳಿಸಿದರು.

ರಫ್ತಿಗೆ ಅವಕಾಶ

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 400 ಹೆಕ್ಟೇರ್ ಗೇರು ಬೆಳೆಯಿದೆ. ಗೇರು ಬೆಳೆಗೆ ಬರ ಪರಿಸ್ಥಿತಿ ಸಹಿಸುವ ಸಾಮರ್ಥ್ಯವಿದೆ. ಜತೆಗೆ ಈ ಬೆಳೆಗೆ ಕೀಟ ಮತ್ತು ರೋಗ ಬಾಧೆ ಕಡಿಮೆ. ವಾಣಿಜ್ಯ ಬೆಳೆಯಾಗಿ ಗೋಡಂಬಿ ಬೆಳೆಯಬಹುದು. ರಫ್ತಿಗೆ ಅವಕಾಶ ಇದೆ’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ಜಿ.ಪ್ರಕಾಶ್ ಅಭಿಪ್ರಾಯಪಟ್ಟರು.

‘ಭಾರತದಲ್ಲಿ 10.62 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಗೇರು ಕೃಷಿ ನಡೆಯುತ್ತಿದೆ. 8.17 ಮೆಟ್ರಿಕ್‌ ಟನ್ ಕಚ್ಚಾ ಗೋಡಂಬಿ ಬೀಜ ಉತ್ಪಾನೆಯಾಗುತ್ತದೆ. 3,900 ಸಂಸ್ಕರಣಾ ಕೇಂದ್ರಗಳಿದ್ದು, ಇವುಗಳಿಗೆ 16.43 ಲಕ್ಷ ಮೆಟ್ರಿಕ್‌ ಟನ್ ಗೋಡಂಬಿ ಬೇಕು. ಆದರೆ, ಶೇ 50ರಷ್ಟು ಮಾತ್ರ ಲಭ್ಯ ಇರುವುದರಿಂದ 6.49 ಲಕ್ಷ ಮೆಟ್ರಿಕ್‌ ಟನ್ ಆಮದು ಮಾಡಿಕೊಳ್ಳಲಾಗುತ್ತದೆ’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎನ್.ಅಶ್ವತ್ಥನಾರಾಯಣರೆಡ್ಡಿ ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಸ್.ವಿ.ಹಿತ್ತಲಮನಿ, ಸಹ ಸಂಶೋಧನಾ ನಿರ್ದೇಶಕ ಟಿ.ಆರ್.ಗುರುಪ್ರಸಾದ್. ತೋಟಗಾರಿಕೆ ವಿ.ವಿ ಸಹ ವಿಸ್ತರಣಾ ನಿರ್ದೇಶಕ ಟಿ.ಬಿ.ಬಸವರಾಜು, ರೇಷ್ಮೆ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಕೆ.ಎಂ.ರಾಜಣ್ಣ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ.ತುಳಸಿರಾಮ್‌, ಪ್ರಗತಿಪರ ರೈತ ನಾಗರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.