ಮಾಲೂರು: ಜಾತಿ ಗಣತಿ ಜಾರಿಗೊಳಿಸಲು ಸರ್ಕಾರದ ಬಳಿ ಸರಿಯಾದ ದತ್ತಾಂಶ ಇಲ್ಲದೇ ಇರುವುದರಿಂದ, ಹೊಸದಾಗಿ ಗಣತಿ ಮಾಡಬೇಕಾಗಿದೆ. ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗ ಸಮುದಾಯದ ಎಲ್ಲರೂ ತಪ್ಪದೇ ತಮ್ಮ ಜಾತಿ ಭೋವಿ, ಉಪಜಾತಿ ವಡ್ಡರ್ ಎಂದೇ ಬರೆಸಬೇಕು ಎಂದು ಭಾರತೀಯ ಭೋವಿ (ವಡ್ಡರ್) ಸಮಾಜ ಸಂಘದ ಕಾರ್ಯಧ್ಯಕ್ಷ ಮುನಿಮಾರಪ್ಪ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಭೋವಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಾತಿ ಗಣತಿಯಲ್ಲಿ ಭೋವಿ ಸಮುದಾಯದವರು ತಮ್ಮ ಜಾತಿಯನ್ನು ಭೋವಿ ಮತ್ತು ಉಪಜಾತಿಯನ್ನು ವಡ್ಡರ್ ಎಂದು ಬರೆಸಬೇಕು. ಸಮುದಾಯದ ಸದಸ್ಯರಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಮುಂದಿನ ಪೀಳಿಗೆಗೆ ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು.
ಮನೆ, ಆಸ್ತಿ, ವಾಹನಗಳ ವಿವರಗಳನ್ನು ಸರಿಯಾಗಿ ನೀಡಬೇಕು. ಹಿರಿಯರ ಮನೆಯಲ್ಲಿ ಇರುವವರು, ಬ್ಯಾಂಕ್ ಸಾಲದ ಮೂಲಕ ಮನೆ, ವಾಹನ ಮಾಡಿಕೊಂಡಿರುವವರು ತಮಗೆ ಸ್ವಂತ ಮನೆ, ಸ್ವಂತ ವಾಹನ ಇಲ್ಲವೆಂದು ಬರೆಸಬೇಕು. ಮನೆ/ವಾಹನದ ಸಾಲ ತೀರುವವರೆಗೆ ಅದು ಬ್ಯಾಂಕಿನ ಸ್ವತ್ತು ಎಂಬುದು ಗಮನದಲ್ಲಿರಬೇಕು ಎಂದರು.
ಭಾರತೀಯ ಭೋವಿ (ವಡ್ಡರ್) ಸಮಾಜ ಸಂಘದ ಕಾರ್ಯಧ್ಯಕ್ಷ ಡಾ.ಜಯರಾಮ್ ಮಾತನಾಡಿ, ಭೋವಿ ಸಮಾಜದ ಬಡವರು ಸರ್ಕಾರದಿಂದ ಬರುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಮುದಾಯದವರು ಜಾತಿಯ ಹೆಸರನ್ನು ಹೇಳಲು ಅಳುಕುವುದರಿಂದ ರಾಜ್ಯದಲ್ಲಿ ಈ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದರೂ ಕಡಿಮೆ ಇದೆ ಎನ್ನುವ ಫಲಿತಾಂಶ ಬರುತ್ತದೆ. ಜಾತಿಗಣಿತಿಯವರು ಬಂದಾಗ ಜವಾಬ್ದಾರಿಯಿಂದ ವರ್ತಿಸಿ ಧೈರ್ಯವಾಗಿ ಜಾತಿ, ಉಪಜಾತಿಯ ಹೆಸರು ಹೇಳಬೇಕು ಎಂದರು.
ಭೋವಿ ಸಮಾಜದ ಜಿಲ್ಲಾ ಮುಖಂಡ ಎಸ್.ವಿ.ಲೋಕೇಶ್, ಇಟಕ್ ಮಂಜುನಾಥ್, ನರೇಂದ್ರ, ಹೂಡಿ ರಮೇಶ್, ನಿವೃತ್ತ ಪೊಲೀಸ್ ಅಧಿಖಾರಿ ಗುರಪ್ಪ, ಸುಬ್ರಮಣಿ, ಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.