ADVERTISEMENT

ಜಿಲ್ಲೆಯ ರೈತರಿಗೆ ಕೇಂದ್ರದ ಬೆಳೆ ಸಾಲ

ಸಮೀಪದ ಸೊಸೈಟಿಗೆ ಅರ್ಜಿ ಸಲ್ಲಿಸಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 13:37 IST
Last Updated 23 ಫೆಬ್ರುವರಿ 2020, 13:37 IST

ಕೋಲಾರ: ಪ್ರಧಾನಮಂತ್ರಿ ಕಿಸಾನ್ ಯೋಜನೆಯ ರೈತರು ತಮ್ಮ ವ್ಯಾಪ್ತಿಯ ವ್ಯವಸಾಯ ಸೇವಾ ಸಹಕಾರ ಸಂಘ ಸಂಪರ್ಕಿಸಿ ಬೆಳೆ ಸಾಲ ಪಡೆಯಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ಫೆ.19ರಂದು ಡಿಸಿಸಿ ಬ್ಯಾಂಕ್‌ಗೆ ಸಾಲದ ಅರ್ಹ ರೈತರ ಪಟ್ಟಿ ಕಳುಹಿಸಿಕೊಟ್ಟಿದೆ. ಕೇಂದ್ರವು ಫೆ.21ರಂದು ಕಳುಹಿಸಿರುವ ಸಂದೇಶದಲ್ಲಿ ಸಂಬಂಧಪಟ್ಟ ಎಲ್ಲಾ ಕೃಷಿಕರಿಗೆ ಬೆಳೆ ಸಾಲ ಒದಗಿಸುವಂತೆ ಸೂಚನೆ ನೀಡಿದೆ. ಸಂಬಂಧಪಟ್ಟ ಫಲಾನುಭವಿಗಳು ತಕ್ಷಣವೇ ಸಮೀಪದ ಸೊಸೈಟಿ ಸಂಪರ್ಕಿಸಿ ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಲು ಫೆ.26 ಕಡೆ ದಿನವಾಗಿದೆ. ಕೇಂದ್ರ ಸರ್ಕಾರದಿಂದ 3 ಕಂತುಗಳಲ್ಲಿ ₹ 6 ಸಾವಿರ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಪ್ರೋತ್ಸಾಹಧನ ಪಡೆದಿರುವ ರೈತರು ಕೂಡಲೇ ಅಗತ್ಯ ಪಹಣಿ, ಪಟ್ಟ, 13 ವರ್ಷದ ಇ.ಸಿ, ವಂಶವೃಕ್ಷ, ಆಧಾರ್‌ ಕಾರ್ಡ್‌, ಎಪಿಕ್ ಕಾರ್ಡ್‌ನ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದಿಂದ ₹ 6 ಸಾವಿರ ಪಡೆದಿರುವ ರೈತರಿಗೆ ಬ್ಯಾಂಕ್‌ನಿಂದ ಬೆಳೆ ಸಾಲದ ಸಂಬಂಧ ಎಸ್ಎಂಎಸ್‌  ಸಂದೇಶ ರವಾನೆಯಾಗಿದೆ. ಸಂದೇಶ ಪಡೆದುಕೊಂಡಿರುವ ರೈತರು ಸೊಸೈಟಿಗೆ ಧಾವಿಸಿ ಬೆಳೆ ಸಾಲ ಪಡೆಯಬಹುದು. ವ್ಯವಸಾಯ ಸೇವಾ ಸಹಕಾರ ಸಂಘ ನಿಷ್ಕ್ರಿಯವಾಗಿದ್ದರೆ ಆಯಾ ತಾಲ್ಲೂಕು ಕೇಂದ್ರದಲ್ಲಿನ ಡಿಸಿಸಿ ಬ್ಯಾಂಕ್ ಶಾಖೆ ಸಂಪರ್ಕಿಸಬೇಕು. ಈಗಾಗಲೇ ಬೇರೆ ಬ್ಯಾಂಕ್‌ನಿಂದ ಬೆಳೆ ಸಾಲ ಪಡೆದವರು ಈ ಸೌಲಭ್ಯಕ್ಕೆ ಅರ್ಹರಲ್ಲ ಎಂದು ಮಾಹಿತಿ ನೀಡಿದ್ದಾರೆ.

3,376 ಮಂದಿಗೆ ಸಾಲ

ಬೆಳೆ ಸಾಲಕ್ಕೆ ಆಯ್ಕೆಯಾಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 3,376 ರೈತರಲ್ಲಿ ಡಿಸಿಸಿ ಬ್ಯಾಂಕ್ ಈಗಾಗಲೇ 1,565 ರೈತರಿಗೆ ಬೆಳೆ ಸಾಲ ವಿತರಿಸಿದೆ. ಉಳಿದಂತೆ ಎರಡೂ ಜಿಲ್ಲೆಗಳಿಂದ 1,811 ಮಂದಿಗೆ ಬೆಳೆ ಸಾಲ ನೀಡಬೇಕಿದೆ. ಕೋಲಾರ ತಾಲ್ಲೂಕಿನ 263 ರೈತರು, ಮಾಲೂರಿನ 113, ಬಂಗಾರಪೇಟೆಯ 125, ಕೆಜಿಎಫ್‌ನ 18, ಮುಳಬಾಗಿಲಿನ 154 ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 214 ರೈತರು ಅಗತ್ಯ ದಾಖಲೆಪತ್ರಗಳೊಂದಿಗೆ ಸಾಲ ಪಡೆಯಬೇಕು ಎಂದು ಹೇಳಿದ್ದಾರೆ.

ಬಾಗೇಪಲ್ಲಿ ತಾಲ್ಲೂಕಿನ 108, ಚಿಂತಾಮಣಿಯ 447, ಚಿಕ್ಕಬಳ್ಳಾಪುರದ 83, ಗೌರಿಬಿದನೂರಿನ 29, ಗುಡಿಬಂಡೆಯ 59 ಮತ್ತು ಶಿಡ್ಲಘಟ್ಟ ತಾಲ್ಲೂಕಿನ 198 ರೈತರು ಬೆಳೆ ಸಾಲ ಪಡೆಯಬಹುದು. ಕೇಂದ್ರ ಸರ್ಕಾರ ರೂಪಿಸಿರುವ ಹೊಸ ನಿಯಮಾವಳಿಯಂತೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಎಲ್ಲಾ ರೈತರಿಗೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ಯೋಜನೆಯ ಲಾಭ ಕೈತಪ್ಪಿ ಹೋಗದಂತೆ ರೈತರು ಎಚ್ಚೆತ್ತು ಶೀಘ್ರವೇ ಸಾಲ ಪಡೆಯಬೇಕು. ಡಿಸಿಸಿ ಬ್ಯಾಂಕ್ ಈ ನಿಟ್ಟಿನಲ್ಲಿ ರೈತರಿಗೆ ಎಲ್ಲಾ ನೆರವು ನೀಡಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.