ಕೋಲಾರ: ‘ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಈವರೆಗೆ ಒಟ್ಟು 51 ಬಾಲ್ಯವಿವಾಹಗಳ ಸಂಬಂಧ ದೂರುಗಳು ಬಂದಿದ್ದು, 21 ಪ್ರಕರಣಗಳನ್ನು ತಡೆಯಲಾಗಿದೆ. ಇನ್ನುಳಿದ 30 ಪ್ರಕರಣಗಳಲ್ಲಿ ಸಂಬಂಧಪಟ್ಟವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಿಷನ್ ವಾತ್ಸಲ್ಯ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮೊದಲನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಬಾಲ್ಯವಿವಾಹ ಮತ್ತು ಬಾಲಗರ್ಭಿಣಿಯರ ಪ್ರಮಾಣವನ್ನು ಕಡಿಮೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಒತ್ತು ನೀಡಬೇಕು. ಕಾಯ್ದೆಗಳ ಬಗ್ಗೆ ಅರಿವು ಮೂಡಿಸಬೇಕು’ ಸೂಚನೆ ನೀಡಿದರು.
‘ಕೋಲಾರವನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಅಭಿಯಾನ, ಚಳವಳಿ ರೀತಿ ಕೆಲಸ ನಡೆಯಬೇಕು. ತಮ್ಮ ವ್ಯಾಪ್ತಿಯಲ್ಲಿ ಪ್ರಕರಣ ನಡೆದರೆ ಬಾಲ್ಯವಿವಾಹ ನಿಷೇಧಾಧಿಕಾರಿಗಳೇ ಜವಾಬ್ದಾರರು’ ಎಂದು ಹೇಳಿದರು.
ಏಕವ್ಯಕ್ತಿ ಪೋಷಕ ಪ್ರಕರಣಗಳನ್ನು ಪ್ರಕರಣಗಳನ್ನು ಪತ್ತೆ ಹಚ್ಚಿ ಅವರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿಸಬೇಕು ಎಂದರು.
‘ಸರ್ಕಾರಿ ದತ್ತು ಸಂಸ್ಥೆಯು ಕುಟುಂಬದ ಪ್ರೀತಿ ವಂಚಿತ, ಅನಾಥ, ಪರಿತ್ಯಕ್ತ ಹಾಗೂ ನಿರ್ಗತಿಕ 6 ವರ್ಷದೊಳಗಿನ ಮಕ್ಕಳ ಪುನರ್ವಸತಿಗೆ ನೆರವಾಗುವ ಒಂದು ಸಂಸ್ಥೆಯಾಗಿದೆ. ವೀಕ್ಷಣಾಲಯ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ತಾತ್ಕಾಲಿಕವಾಗಿ ಅಭಿರಕ್ಷಣೆ ಒದಗಿಸುವ ಸಂಸ್ಥೆಯಾಗಿದೆ. ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬರುವ ಪ್ರಕರಣಗಳ ವಿಚಾರಣೆ ವೇಳೆಯಲ್ಲಿ ರಕ್ಷಣೆ ಮತ್ತು ಘೋಷಣೆ ಅಗತ್ಯವಿರುವ ಮಕ್ಕಳ ಪಾಲನೆ ಮತ್ತು ರಕ್ಷಣೆಗಾಗಿ ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಬಾಲ ಮಂದಿರ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಸರ್ಕಾರಿ ಪಾಲನಾ ಸಂಸ್ಥೆಗಳಲ್ಲಿ ಒಟ್ಟು 125 ಮಕ್ಕಳು ದಾಖಲಾಗಿರುತ್ತಾರೆ’ ಎಂದು ಹೇಳಿದರು.
‘ಕೋವಿಡ್-19ನಿಂದ ಇಬ್ಬರೂ ಪೋಷಕರನ್ನು ಕಳೆದುಕೊಂಡ 8 ಮಕ್ಕಳಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಮಾಸಿಕ ₹ 3,500 ಆರ್ಥಿಕ ಸಹಾಯವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ’ ಎಂದರು.
ರಾಷ್ಟ್ರ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಮಕ್ಕಳ ಸಹಾಯವಾಣಿ ಮೂಲಕ ತುರ್ತು ಸೇವೆಯನ್ನು ಒದಗಿಸಲಾಗುತ್ತಿದೆ. ಮಕ್ಕಳ ಸಹಾಯವಾಣಿ-1098 ಅನ್ನು ಇಆರ್‌ಎಸ್‌ಎಸ್-112 ನೊಂದಿಗೆ ವಿಲೀನಗೊಳಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿ ಅನುಸ್ಥಾನಗೊಳಿಸಲಾಗುತ್ತಿದೆ’ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಪ ಪ್ರವೀಣ್ ಬಿ.ಬಾಗೇವಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ವಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಬಾಲ್ಯವಿವಾಹ ತಡೆಗಟ್ಟಲು ಅಧಿಕಾರಿಗಳು ಗ್ರಾಮೀಣ ಪ್ರದೇಶ ಹಾಗೂ ಕೆಲ ಸಮುದಾಯದ ಪ್ರದೇಶಗಳಿಗೆ ಹೋಗಿ ಅರಿವು ಮತ್ತು ಪ್ರಚಾರ ಕಾರ್ಯಕ್ರಮ ನಡೆಸಬೇಕುಎಂ.ಆರ್.ರವಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.