ಮುಳಬಾಗಿಲು: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಶನಿವಾರ ನಗರದ ನಗರಸಭೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದ ಮುಳಬಾಗಿಲು ಶಾಖೆಯ ನೌಕರರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಸರ್ಕಾರ ಎಲ್ಲಾ ರೀತಿಯ ನೌಕರರಿಗೆ ನೀಡುವ ಸೌಲಭ್ಯಗಳನ್ನು ಪೌರಕಾರ್ಮಿಕರಿಗೂ ನೀಡಬೇಕು. ದಿನಗೂಲಿ ನೌಕರರನ್ನು ಸಕ್ರಮಾತಿಗೊಳಿಸಬೇಕು. 2022ರ ವಿಶೇಷ ನೇಮಕಾತಿ ಅಡಿಯಲ್ಲಿ ಆಯ್ಕೆಯಾದ ಪೌರಕಾರ್ಮಿಕರು ಹಾಗೂ ಲೋಡರ್ಸ್‌ಗಳಿಗೆ ಎಸ್‌ಎಫ್‌ಸಿ ವೇತನ ನಿಧಿಯಿಂದ ವೇತನ ಪಾವತಿಸಬೇಕು. ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನು ವಿಶೇಷ ನೇಮಕಾತಿ ಎಂದು ಪರಿಗಣಿಸಬೇಕು. ಪೌರಸೇವಾ ನೌಕರರಿಗೆ ಜ್ಯೋತಿ ಸಂಜೀವಿನಿ ನಗದು ರಹಿತ ಚಿಕಿತ್ಸಾ ಸೌಲಭ್ಯ ನೀಡಬೇಕು. ಐಟಿ, ಅಕೌಂಟೆಂಟ್, ಕನ್ಸಲ್ಟೆಂಟ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು ಹಾಗೂ ಸ್ಯಾನಿಟರಿ ಸೂಪರ್ ವೈಸರ್ ಮತ್ತಿತರ ವೃಂದದ ನೌಕರರನ್ನು ಸೇವೆಯಲ್ಲಿ ವಿಲೀನಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಪೌರ ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ಮುನಿವೆಂಕಟಪ್ಪ ಮಾತನಾಡಿ, ಪೌರಕಾರ್ಮಿಕರು ನಗರದ ಸ್ವಚ್ಛಗೊಳಿಸುವಲ್ಲಿ ಮುಖ್ಯ ಪಾತ್ರವಹಿಸುತ್ತಾರೆ. ಆದರೆ ಅವರಿಗೆ ಸೌಲಭ್ಯ ಒದಗಿಸದಿರುವುದು ಬೇಸರದ ಸಂಗತಿ ಎಂದರು.
ರಾಜ್ಯದ ಸ್ವಚ್ಛತೆಯ ಭಾರ ಹೊತ್ತಿರುವ ಪೌರಕಾರ್ಮಿಕರು ನಾನಾ ಬಗೆಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಅವರ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದರು.
ಸುನಿಲ್ ಕುಮಾರ್, ಪ್ರತಿಭಾ, ನಾಗರಾಜ್, ಅಮೀರ್ ಜಾನ್ ಹಾಗೂ ಪೌರಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.