ADVERTISEMENT

ಕೋಚ್ ಕಾರ್ಖಾನೆ ಸ್ಥಾಪನೆ ಸಾಧ್ಯವಿಲ್ಲ: ಸಂಸದ ಮುನಿಸ್ವಾಮಿ ಹೇಳಿಕೆ

ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 16:03 IST
Last Updated 20 ಜುಲೈ 2019, 16:03 IST
ಎಸ್‌.ಮುನಿಸ್ವಾಮಿ
ಎಸ್‌.ಮುನಿಸ್ವಾಮಿ   

ಕೋಲಾರ: ‘ಜಿಲ್ಲೆಯ ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್ ಕಾರ್ಖಾನೆ ತೆರೆಯಲು ಸಾಧ್ಯವಿಲ್ಲ ಎಂದು ಕೇಂದ್ರದ ರೈಲ್ವೆ ಸಚಿವಾಲಯ ಸ್ಪಷ್ಟವಾಗಿ ತಿಳಿಸಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ. ‘ದೇಶದ ನಾನಾ ಕಡೆ ರೈಲ್ವೆ ಕೋಚ್ ಕಾರ್ಖಾನೆಗಳಿವೆ. ರೈಲು ಕೋಚ್‌ಗೆ ಬೇಡಿಕೆ ಕಡಿಮೆ ಇರುವುದರಿಂದ ಜಿಲ್ಲೆಯಲ್ಲಿ ಕೋಚ್ ಕಾರ್ಖಾನೆ ತೆರೆಯುವ ಸಾಧ್ಯತೆಯಿಲ್ಲ’ ಎಂದು ತಿಳಿಸಿದರು.

‘ಕೋಚ್ ಕಾರ್ಖಾನೆ ಯೋಜನೆ ನನೆಗುದಿಗೆ ಬಿದ್ದಿರುವ ಸಂಬಂಧ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿದಾಗ ದೇಶದಲ್ಲಿ ಕೋಚ್ ಕಾರ್ಖಾನೆಗಳು ಸಾಕಷ್ಟಿವೆ. ಈ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ಕೋಚ್‌ಗಳಿಗೆ ಬೇಡಿಕೆ ಕುಸಿದಿರುವ ಕಾರಣ ಕೋಲಾರ ಜಿಲ್ಲೆಯಲ್ಲಿ ಕಾರ್ಖಾನೆ ತೆರೆಯುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಇದಕ್ಕೆ ಬದಲಾಗಿ ಜಿಲ್ಲೆಗೆ ಬೇರೆ ಯೋಜನೆ ರೂಪಿಸೋಣ ಎಂದು ಭರವಸೆ ನೀಡಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ತರಾತುರಿಯಲ್ಲಿ ಶ್ರೀನಿವಾಸಪುರದಲ್ಲಿ ಕೋಚ್ ಕಾರ್ಖಾನೆಗೆ ಶಂಕುಸ್ಥಾಪನೆ ಮಾಡಿಸಿದ್ದರು. ಆದರೆ, ಅಲ್ಲಿ ಕಾರ್ಖಾನೆ ಸ್ಥಾಪನೆ ಸಾಧ್ಯವಿಲ್ಲ ಎಂದು ರೈಲ್ವೆ ಸಚಿವಾಲಯ ಅವರಿಗೆ ಮೊದಲೇ ತಿಳಿಸಿತ್ತು. ಅಲ್ಲದೇ, ಮುನಿಯಪ್ಪ ಅವರೇ ಕೋಚ್ ಕಾರ್ಖಾನೆ ಬೇಡವೆಂದು ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ’ ಎಂದು ಮಾಹಿತಿ ನೀಡಿದರು.

ಸಚಿವರು ಬರುತ್ತಾರೆ: ‘ಜಿಲ್ಲೆಯಲ್ಲಿ ಕೆಲ ರೈಲು ಮಾರ್ಗಗಳ ಕಾಮಗಾರಿ ಅರ್ಧಕ್ಕೆ ನಿಂತಿದೆ. ಆ ಮಾರ್ಗಗಳ ಸಾಧಕ ಬಾಧಕದ ಬಗ್ಗೆ ಪರಿಶೀಲನೆ ನಡೆಸಲು ಮತ್ತು ಜಿಲ್ಲೆಯ ರೈಲ್ವೆ ಪ್ರಯಾಣಿಕರ ಸಮಸ್ಯೆ ಅರಿತು ಪರಿಹಾರ ಕಲ್ಪಿಸಲು ರೈಲ್ವೆ ಸಚಿವಾಲಯದ ರಾಜ್ಯ ಸಚಿವ ಸುರೇಶ್ ಅಂಗಡಿ ಜಿಲ್ಲೆಗೆ ಬರುತ್ತಾರೆ’ ಎಂದು ತಿಳಿಸಿದರು.

‘ಜಿಲ್ಲೆಯ ವಿವಿಧೆಡೆ ಹೊಸದಾಗಿ ನಿರ್ಮಿಸಿರುವ ರೈಲ್ವೆ ಕೆಳಸೇತುವೆಗಳಲ್ಲಿ ಮಳೆ ನೀರು ನಿಂತು ಸಮಸ್ಯೆ ಆಗುತ್ತಿರುವ ಬಗ್ಗೆ ಸಚಿವ ಸುರೇಶ್‌ ಅಂಗಡಿ ಜತೆ ಮಾತನಾಡಿದ್ದೇನೆ. ಈ ಸಮಸ್ಯೆ ಪರಿಹಾರ ಮಾಡುತ್ತೇವೆ. ಕೋಲಾರ ತಾಲ್ಲೂಕಿನ ತೂರಂಡಹಳ್ಳಿ ಬಳಿಯ ರೈಲು ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಎರಡು ಗ್ರಾಮಗಳ ಜನರ ನಡುವೆ ವಿವಾದವಿದೆ. ಇದನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ಕಾದು ನೋಡಿ: ‘ಕೆಜಿಎಫ್‌ನಲ್ಲಿ ಗಣಿ ಮುಚ್ಚಿ ಹಲವು ವರ್ಷಗಳಾಗಿವೆ. ಇದರಿಂದ ಅಲ್ಲಿನ ಜನ ನಿರುದ್ಯೋಗಿಗಳಾಗಿದ್ದಾರೆ. ಈ ವಿಚಾರವಾಗಿ ಕೇಂದ್ರ ಗಣಿ ಸಚಿವರೊಂದಿಗೆ ಚರ್ಚಿಸಿದ್ದು, ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ’ ಎಂದು ವಿವರಿಸಿದರು.

ರಾಜ್ಯದ ರಾಜಕೀಯ ವಿದ್ಯಮಾನದ ಬಗ್ಗೆ ಪ್ರತಿಕ್ರಿಯಿಸಿ, ‘ರಾಜ್ಯದ ಈಗಿನ ಸ್ಥಿತಿಗತಿ ನೋಡಿದರೆ ಬಿಜೆಪಿಗೆ ಅನುಕೂಲಕರ ವಾತಾವರಣವಿದೆ. ನಾವು ಸಹ ಅದೇ ಭರವಸೆ ಇಟ್ಟುಕೊಂಡಿದ್ದೇವೆ. ನೋಡೋಣ ಮುಂದೆ ಏನಾಗುತ್ತದೆ. ಮೂರು ದಿನ ಕಾದು ನೋಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.