ADVERTISEMENT

ಹಾಲು ಮಂಡಳಿಯಿಂದ ಕೋಚಿಮುಲ್‌ಗೆ ಅನುಮತಿ

ಯುಎಚ್‌ಟಿ ಹಾಲು ಸರಬರಾಜು ಮಾಡಲು ಆಂಧ್ರ, ತೆಲಂಗಾಣದಿಂದ ಪ್ರಸ್ತವ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2018, 16:22 IST
Last Updated 4 ಆಗಸ್ಟ್ 2018, 16:22 IST

ಕೋಲಾರ: ಆಂಧ್ರಪ್ರದೇಶ ಮತ್ತು ತೆಲಂಗಾಣದ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಕಾಫೀ ಡೇ ಸಂಸ್ಥೆಗೆ ಪ್ರತಿನಿತ್ಯ 50 ಸಾವಿರ ಲೀಟರ್ ಯುಎಚ್‌ಟಿ ಹಾಲು ಪೂರೈಸಲು ಕರ್ನಾಟಕ ಹಾಲು ಹಮಾ ಮಂಡಳಿವೂ (ಕೆಎಂಎಎಫ್‌), ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಕೋಚಿಮುಲ್‌) ಅನುಮತಿ ನೀಡಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಿ ಹಾಗೂ ಖಾಸಗಿ ಡೇರಿಗಳಿಂದ ಯುಎಚ್‌ಟಿ ಹಾಲನ್ನು ಕೋ ಪ್ಯಾಕಪ್ ಮಾಡಿ ಸರಬರಾಜು ಮಾಡುವ ಸಂಬಂಧ ಮಂಡಳಿಗೆ ಆ ಸರ್ಕಾರಗಳಿಂದ ಪ್ರಸ್ತವ ಬಂದಿತು. ಸೇನಾಪಡೆಗೆ ಯುಎಚ್‌ಟಿ ಹಾಲು ಸಬರಾಜು ಮಾಡುವ ಅವಕಾಶ ಕೈ ತಪ್ಪಿದ ಹಿನ್ನಲೆಯಲ್ಲಿ ಈ ಅವಕಾಶ ಒಕ್ಕೂಟಕ್ಕೆ ಸಿಕ್ಕಿದೆ.

ಜಿಲ್ಲಾ ಹಾಲು ಒಕ್ಕೂಟದಿಂದ ಸೇನಾಪಡೆಗೆ ವಾರ್ಷಿಕವಾಗಿ 80 ಲಕ್ಷ ಲೀಟರ್ ಯುಎಚ್‌ಟಿ ಹಾಲನ್ನು ಪೂರೈಕೆ ಮಾಡಲಾಗುತ್ತಿತ್ತು, ಆದರೆ ಇತ್ತೀಚೆಗೆ ಈ ಗುತ್ತಿಗೆಯಲ್ಲಿ ಶೇ.50 ರಷ್ಟು ಅಂದರೆ 40 ಲಕ್ಷ ಲೀಟರ್ ಪೂರೈಕೆ ಮಾಡುವ ಅವಕಾಶವನ್ನು ಹಾಸನ ಜಿಲ್ಲಾ ಹಾಲು ಒಕ್ಕೂಟಕ್ಕೆ ನೀಡುವ ಅವಕಾಶ ಕಲ್ಪಿಸಿಕೊಟ್ಟಿದೆ, ಇದರಿಂದಾಗಿ ಹಾಲು ಒಕ್ಕೂಟಕ್ಕೆ ನಷ್ಟ ಉಂಟಾಗುವ ಭೀತಿ ಎದುರಾಗಿತ್ತು.

ADVERTISEMENT

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಹಾಗು ಒಕ್ಕೂಟದ ನಿರ್ದೇಶಕರು ಭೇಟಿಯಾಗಿ ‘2008ರಿಂದಲೂ ರಾಜ್ಯದಿಂದ ಸೇನಾಪಡೆಗೆ 80 ಲಕ್ಷ ಲೀಟರ್ ಹಾಲು ಪೂರೈಕೆ ಮಾಡಲಾಗುತ್ತಿದೆ. ಸೇನಾಪಡೆಯೂ 201819ನೇ ಸಾಲಿಗೆ ಹಾಲು ಪೂರೈಕೆಗೆ ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಹಾಸನ ಜಿಲ್ಲೆಯ ಹಾಲು ಒಕ್ಕೂಟಕ್ಕೆ ಸಂಪೂರ್ಣವಾಗಿ ಅವಕಾಶ ಕಲ್ಪಿಸಲಾಯಿತು. ಇದರಿಂದಾಗಿ ಉಂಟಾಗುವ ನಷ್ಟದ ಬಗ್ಗೆ’ ಎಂದು ನಿರ್ದೇಶಕರು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದರು.

‘ಚಿಕ್ಕಬಳ್ಳಾಪುರ ಜಿಲ್ಲೆಯ ಮೇಗಾ ಡೇರಿಯಲ್ಲಿ ಪ್ರಯೋಗಿಕವಾಗಿ ಯುಎಚ್‌ಟಿ ಹಾಲು ಉತ್ಪಾದನೆ ಗುರುವಾರದಿಂದ ಆರಂಭಿಸಿದ್ದು, ಸೋಮವಾರ (ಆ.6)ದಿಂದ ಆಂಧ್ರ, ತೆಲಂಗಾಣದ ಅಂಗನವಾಡಿ ಮತ್ತು ಕಾಫಿಡೇಗೆ ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗಿದೆ’ ಎಂದು ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸೇವಾಪಡೆಗೆ ಹಾಲು ಸರಬರಾಜು ಮಾಡುವ ಟೆಂಡರ್ ಕೈತಪ್ಪಿದ ಹಿನ್ನಲೆಯಲ್ಲಿ ಮಂಡಳಿಯೂ ಒಕ್ಕೂಟಕ್ಕೆ ಕಲ್ಪಿಸಿದೆ. ಪ್ರತಿ ನಿತ್ಯ 50ಸಾವಿರ ಪೂರೈಕೆ ಮಾಡಬೇಕಾಗಿರುವುದರಿಂದ ವಾರ್ಷಿಕವಾಗಿ 180 ಲಕ್ಷ ಲೀಟರ್ ಹಾಲು ಸರಬರಾಜು ಮಾಡಲು ಅವಕಾಶ ಸಿಕ್ಕಿದಂತಾಗಿದೆ’ ಎಂದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪ್ರತಿನಿತ್ಯ 11.50 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮೂರು ತಿಂಗಳಿನಿಂದ 3.50 ಲಕ್ಷ ಲೀಟರ್ ಹಾಲು ಸಂಗ್ರಹಣೆ ಹೆಚ್ಚಳವಾಗಿದೆ. ಆದರೆ, ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ನಷ್ಟವಾಗುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಯುಎಚ್‌ಟಿ ಹಾಲು ಪೂರೈಕೆಗೆ ಪೆಟ್ಟು ಬಿದ್ದರೆ ಮತ್ತಷ್ಟು ನಷ್ಟ ಅನುಭವಿಸುವುದನ್ನು ತಪ್ಪಿಸಲು ಮಂಡಳಿಯೂ ಅವಕಾಶ ನೀಡಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.