ADVERTISEMENT

ನಿರ್ಗಮಿತ ತಹಶೀಲ್ದಾರ್‌ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 15:37 IST
Last Updated 10 ಆಗಸ್ಟ್ 2021, 15:37 IST

ಕೋಲಾರ: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪೋಷಕರ ಷಷ್ಠಿಪೂರ್ತಿ ಕಾರ್ಯಕ್ರಮ ನಡೆಸಿದ್ದ ನಿರ್ಗಮಿತ ತಹಶೀಲ್ದಾರ್‌ ಶೋಭಿತಾ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಅವರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಶೋಭಿತಾ ಅವರು ಜಿಲ್ಲಾ ಕೇಂದ್ರದ ಕಲ್ಯಾಣ ಮಂಟಪವೊಂದರಲ್ಲಿ ಆ.6ರಂದು ತಮ್ಮ ತಂದೆ ತಾಯಿಯ ಷಷ್ಠಿಪೂರ್ತಿ ಸಮಾರಂಭ ನಡೆಸಿದ್ದರು. ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಶೋಭಿತಾ ಅವರ ಸಂಬಂಧಿಕರು, ಸ್ನೇಹಿತರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.

ಷಷ್ಠಿಪೂರ್ತಿ ಜತೆಗೆ ಪೂಜೆ, ಆರತಕ್ಷತೆ ಸಹ ನಡೆಸಲಾಗಿತ್ತು. ಕಲ್ಯಾಣ ಮಂಟಪದಲ್ಲಿ ಕಿಕ್ಕಿರಿದು ಸೇರಿದ್ದ ಸಾವಿರಾರು ಮಂದಿ ಅಂತರ ಕಾಯ್ದುಕೊಳ್ಳದೆ ಮತ್ತು ಮಾಸ್ಕ್‌ ಧರಿಸದೆ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ್ದರು. ಹಿತೈಷಿಗಳು, ಸ್ನೇಹಿತರು ಹಾಗೂ ಸಂಬಂಧಿಕರು ಕೋವಿಡ್‌ ಆತಂಕ ಮರೆತು ಶೋಭಿತಾ ಪೋಷಕರಿಗೆ ಹಸ್ತಲಾಘವ ನೀಡಿ ಶುಭ ಕೋರಿದ್ದರು.

ADVERTISEMENT

ಶೋಭಿತಾ ಅವರು ಕೋವಿಡ್‌ ಆತಂಕದ ನಡುವೆಯೂ ಸರ್ಕಾರದ ಆದೇಶ ಧಿಕ್ಕರಿಸಿ ಪೋಷಕರ ಷಷ್ಠಿಪೂರ್ತಿ ಕಾರ್ಯಕ್ರಮ ನಡೆಸಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ, ಕಾರ್ಯಕ್ರಮಕ್ಕೆ ಪೂರ್ವಾನುಮತಿ ಪಡೆಯದ ಆರೋಪ ಹಾಗೂ ಸಾಂಕ್ರಾಮಿಕ ಕಾಯಿಲೆ ತಡೆ ಕಾಯ್ದೆಯಡಿ ಶೋಭಿತಾ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಜಣ್ಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.