ADVERTISEMENT

ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 8:57 IST
Last Updated 2 ಡಿಸೆಂಬರ್ 2019, 8:57 IST
ಕೋಲಾರ ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶನಿವಾರ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು.
ಕೋಲಾರ ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶನಿವಾರ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು.   

ಕೋಲಾರ: ‘ವಿದ್ಯಾರ್ಥಿಗಳು ಜೀವನದಲ್ಲಿ ಮಾನವೀಯ ಮೌಲ್ಯ ಮೈಗೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ’ ಎಂದು ಸಮಾಜಿ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎ.ಸಿ.ರಾಜಣ್ಣ ತಿಳಿಸಿದರು.

ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿ ಮಾತನಾಡಿ, ‘ಮಕ್ಕಳ ನಡೆ, ನುಡಿ, ಸತ್ಯ ಮತ್ತು ಧರ್ಮದ ಕಡೆ ಇರಬೇಕು. ತಂದೆ ತಾಯಿ ಮತ್ತು ಗುರುಗಳನ್ನು ಗೌರವಿಸುವ ಮಾನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತಲೂ ಕಡಿಮೆ ಇಲ್ಲ. ನುರಿತ ಶಿಕ್ಷಕರಿಂದ ವಿದ್ಯೆ ಕಲಿತವರು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜದ ಉನ್ನತಿಗಾಗಿ ಶ್ರಮಿಸಿದ ಮಾಹನ್ ವ್ಯಕ್ತಿಗಳ ಆದರ್ಶ, ತತ್ವಗಳನ್ನು ಪಾಲಿಸಬೇಕು’ ಎಂದು ಹೇಳಿದರು.

ADVERTISEMENT

ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಮೈಲೇರಪ್ಪ ಮಾತನಾಡಿ, ‘ಉತ್ತಮ ವಾತಾವರಣ, ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿ ಸಾಧ್ಯ. ಸರ್ಕಾರ ನೀಡುವ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು, ಸಂಘ ಸಂಸ್ಥೆಗಳ, ದಾನಿಗಳ ಸಹಕಾರ ಪಡೆದು ಸರ್ಕಾರ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಾಲಾಜಿ ಮಾತನಾಡಿ, ‘ವಿದ್ಯಾರ್ಥಿಗಳು ಜ್ಞಾನಾರ್ಜನೆ ಸಂದರ್ಭದಲ್ಲಿ ಕಲಿಯುವ ಹಸಿವನ್ನು ಹೊಂದಬೇಕು. ಕಲಿತ ಮೇಲೆ ನಾವು ಬೆಳೆದು ಬಂದ ದಾರಿಯನ್ನು ಮರೆಯಬಾರದು. ನಂತರದಲ್ಲಿ ಸಮಾಜಕ್ಕೆ ತಮ್ಮ ಕೊಡುಗೆಯನ್ನು ಸಮರ್ಪಣೆ ಮಾಡುವ ಮನೋಭಾವ ಹೊಂದಬೇಕು’ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಶ್ರೀನಿವಾಸ್, ಶಿಕ್ಷಣ ಸಂಯೋಜಕರಾದ ಶ್ರೀನಿವಾಸನ್, ವೆಂಕಟಾಚಲಪತಿ, ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಗೋವಿಂದ, ಮುಖ್ಯೋಪಾದ್ಯಾಯ ವೆಂಕಟಶಿವಪ್ಪ, ಸಹ ಶಿಕ್ಷಕಿ ಆರ್.ನಿರ್ಮಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.