ಬಂಗಾರಪೇಟೆ: ಸಹಕಾರಿ ಕ್ಷೇತ್ರದಲ್ಲಿ ಪ್ರಭಾವಿಗಳ ದಬ್ಬಾಳಿಕೆಯಿಂದ ದಲಿತರು, ಹಿಂದುಳಿದವರ ಪ್ರವೇಶ ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರೋಪಿಸಿದರು.
ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಸಮೀಕ್ಷೆಯಲ್ಲಿ ಬಲಗೈ ಸಮುದಾಯದವರು ಶೇ 70 ರಷ್ಟು ಮಾತ್ರ ಮಾಹಿತಿ ನೀಡಿದ್ದು, ಉಳಿದವರು ಮಾಹಿತಿಯನ್ನು ನೀಡಿಲ್ಲ. ಹಾಗಾಗಿ ಮುಖ್ಯಮಂತ್ರಿ ಬಳಿ ಮನವಿ ಮಾಡಿ ಸಮೀಕ್ಷೆಗೆ ಮೂರು ದಿನ ವಿಸ್ತರಣೆ ಮಾಡಲಾಗಿದೆ. ಈಗಲಾದರೂ ಸಮೀಕ್ಷೆಯಲ್ಲಿ ನಮ್ಮ ಮೂಲ ಜಾತಿ ಮತ್ತು ಉಪ ಜಾತಿಗಳನ್ನು ಹೊಲೆಯ ಎಂದು ನಮೂದಿಸಿ ನಿರ್ಲಕ್ಷ್ಯ ಮಾಡಬೇಡಿ ಎಂದರು.
ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ವರ್ಗೀಕರಣ ಮಾಡುವುದರಿಂದ ನಮ್ಮ ಜಾತಿಯನ್ನು ಯಾವುದೇ ಮುಜುಗರವಿಲ್ಲದೆ ಹೊಲೆಯ ಎಂದೇ ನಮೂದಿಸಿ ಎಂದು ಕರೆ ನೀಡಿದರು.
ಸಹಕಾರಿ ಕ್ಷೇತ್ರದಲ್ಲಿ ಜಾತಿ ನೋಡಿ ಆದ್ಯತೆ ನೀಡಬಾರದು. ಅಧಿಕಾರ ಒಂದು ಜಾತಿಗೆ ಸೀಮಿತವಾಗಬಾರದು. ಈ ಕ್ಷೇತ್ರದಲ್ಲಿ ಪ್ರಬಲರ ದಬ್ಬಾಳಿಕೆ ಹೆಚ್ಚಾಗಿರುವುದರಿಂದ ದಲಿತರು, ಹಿಂದುಳಿದವರು ಸಹಕಾರಿ ಕ್ಷೇತ್ರ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸಲು ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಅಂಗೀಕರಿಸಿದ ಶಿಪಾರಸನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದು, ಬಿಜೆಪಿ ಕೈಗೊಂಬೆಯಾಗಿದ್ದ ರಾಜ್ಯಪಾಲರು ವಜಾ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಚುನಾವಣೆ ಮತ್ತು ಕೋಮುಲ್ ಚುನಾವಣೆಗೆ ಸಂಬಂಧಿಸಿದಂತೆ ಯಾರೂ ಸಹ ನನ್ನ ಮತ್ತು ನನ್ನ ಸೋದರಿ ರೂಪಕಲಾ ಅವರೊಂದಿಗೆ ಚರ್ಚಿಸಿಲ್ಲ. ಅವರು ಗುಪ್ತವಾಗಿ ಮಾಜಿ ಶಾಸಕ ರಮೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಅನಿಲ್‌ಕುಮಾರ್ ಹೇಳಿದ್ದಂತೆ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಕೊತ್ತೂರು ಮಂಜುನಾಥ್ ಮತ್ತು ಅನಿಲ ಕುಮಾರ್ ಅವರ ಉದ್ದೇಶ ಒಂದೇ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಯಾವುದೇ ಕಾರಣಕ್ಕೂ ಕೋಮಲ್ ಚುನಾವಣೆಯಲ್ಲಿ ಸ್ಪರ್ಧಿಸದ್ದಂತೆ ತಡೆಯುವುದು ಟಾಂಗ್ ನೀಡಿದರು.
ಗೋಪಾಲಮೂರ್ತಿ ಡಿ.ಆರ್.ಜೋಷಿ ಅವರು ತುಂಬಾ ಪ್ರಾಮಾಣಿಕರು ಎಂದು ಹೇಳಿಕೊಳ್ಳುತ್ತಾರೆ. ಮಲ್ಲಂಗುರ್ಕಿ ಮತ್ತು ಎಸ್. ಮಾದಮಂಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಆಡಳಿತ ಮಂಡಳಿಯ ಅಧಿಕಾರ ಅವಧಿ ಮುಗಿದಿದ್ದು ಎರಡೂ ಸಂಘಗಳಿಗೆ ಆಡಳಿತಾಧಿಕಾರಿಗಳಾಗಿ ಡೇಲಿಗೇಟ್ ಅನ್ನು ಆಯ್ಕೆ ಮಾಡಿದ್ದಾರೆ. ಕೋಮಲ್ ವ್ಯವಸ್ಥಾಪಕ ಚೇತನ ಭ್ರಷ್ಟ ಅಧಿಕಾರಿ ಕಾನೂನು ಮೀರಿ ಡೇಲಿಗೇಟ್ ನೀಡಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.