ADVERTISEMENT

ಗ್ರಾ.ಪಂ ತೆರಿಗೆ ಪರಿಷ್ಕರಣೆಗೆ ನಿರ್ಧಾರ

ಆದಾಯ ಹೆಚ್ಚಳವಾಗಲಿದೆ: ಜಿ.ಪಂ ಸಿಇಒ ಜಗದೀಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 12:24 IST
Last Updated 3 ಆಗಸ್ಟ್ 2019, 12:24 IST
ಜಿ.ಜಗದೀಶ್‌
ಜಿ.ಜಗದೀಶ್‌   

ಕೋಲಾರ: ‘ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಪರಿಷ್ಕರಣೆಗೆ ಕ್ರಮ ಕೈಗೊಂಡಿದ್ದು, ಇದರಿಂದ ಶೇ 5ರಷ್ಟು ಆದಾಯ ಹೆಚ್ಚಳವಾಗುವ ನಿರೀಕ್ಷೆಯಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯ ಗ್ರಾ.ಪಂಗಳಲ್ಲಿ ಹಲವು ವರ್ಷಗಳಿಂದ ತೆರಿಗೆ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ ತೆರಿಗೆ ಪರಿಷ್ಕರಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಆ.9ರಂದು ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಗ್ರಾ.ಪಂಗೆ ಬರುವ ತೆರಿಗೆಯಿಂದಲೇ ಸಿಬ್ಬಂದಿಗೆ ವೇತನ ಪಾವತಿಯಾಗುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ₹ 3 ಕೋಟಿ ತೆರಿಗೆ ವಸೂಲಿಯಾಗುತ್ತಿತ್ತು. ಹಿಂದಿನ ವರ್ಷದ ತೆರಿಗೆ ವಸೂಲಿ ಗುರಿ ₹ 10.86 ಕೋಟಿಯಿತ್ತು. ಅಂತಿಮವಾಗಿ ₹ 10.66 ಕೋಟಿ ತೆರಿಗೆ ವಸೂಲಿ ಮಾಡಿದ್ದು, ಶೇ 95ರಷ್ಟು ಗುರಿ ಸಾಧಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಜಿಲ್ಲೆಯ 156 ಗ್ರಾ.ಪಂ ಪೈಕಿ 3 ಪಂಚಾಯಿತಿಗಳಲ್ಲಿ ತೆರಿಗೆ ಪರಿಷ್ಕರಣೆ ಬಾಕಿಯಿದೆ. ಕೆಲ ನ್ಯೂನತೆಗಳಿಂದ ಪರಿಷ್ಕರಣೆ ತಡವಾಗಿದೆ. ಸದ್ಯದಲ್ಲೇ ಆ ಗ್ರಾ.ಪಂಗಳಲ್ಲೂ ತೆರಿಗೆ ಪರಿಷ್ಕರಣೆ ಮಾಡಲಾಗುವುದು. ಪರಿಷ್ಕರಣೆ ಸಂಬಂಧ ಪಂಚಾಯಿತಿಗಳಲ್ಲಿ ಠರಾವು ಹೊರಡಿಸಿ, ವೇಳಾಪಟ್ಟಿ ಪ್ರಕಾರ ಕೆಲಸ ನಿರ್ವಹಿಸುವಂತೆ ಸೂಚಿಸುತ್ತೇವೆ’ ಎಂದು ಮಾಹಿತಿ ನೀಡಿದರು.

1.15 ಲಕ್ಷ ಅರ್ಜಿ: ‘ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ 1.15 ಲಕ್ಷ ರೈತರು ಅರ್ಜಿ ಸಲ್ಲಿಸಿದ್ದು, ವಾರ್ಷಿಕವಾಗಿ ಕೇಂದ್ರ ₹ 6 ಸಾವಿರ ಮತ್ತು ರಾಜ್ಯ ಸರ್ಕಾರ ₹ 4 ಸಾವಿರ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ’ ಎಂದರು.

‘ಜಿಲ್ಲೆಯಲ್ಲಿ ಕೆರೆ, ಕುಂಟೆ, ಕಲ್ಯಾಣಿ ಹಾಗೂ ಸರ್ಕಾರಿ ಜಾಗ ಒತ್ತುವರಿಯಾಗಿದೆ. ಈ ಜಾಗಗಳ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಲಾಗಿದೆ. ಗಡಿ ಗುರುತಿಸಿ ಸರ್ಕಾರಿ ಆಸ್ತಿ ಎಂದು ಫಲಕ ಹಾಕುತ್ತೇವೆ. ಇನ್ನು ಯಾರಾದರೂ ಒತ್ತುವರಿಯಲ್ಲಿದ್ದರೆ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಅನುದಾನಕ್ಕೆ ಮನವಿ: ‘ಮುಖ್ಯಮಂತ್ರಿಯವರ ಸಭೆಯಲ್ಲಿ ಸರ್ಕಾರಿ ನೌಕರರು ನಿಗದಿತ ಅವಧಿಯಲ್ಲಿ ಕಚೇರಿಗೆ ಹಾಜರಾಗಬೇಕು ಮತ್ತು ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡಬೇಕೆಂದು ಆದೇಶಿಸಿದ್ದಾರೆ. ಸಾರ್ವಜನಿಕರನ್ನು ವಿನಾಕಾರಣ ಕಚೇರಿಗೆ ಆಲೆಸುವುದನ್ನು ತಪ್ಪಿಸಲು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಜತೆಗೆ ಜಿಲ್ಲಾಧಿಕಾರಿ ಹಾಗೂ ಸಿಇಒಗಳು ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲಿಸುವಂತೆ ಸೂಚಿಸಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಎದುರಾಗಿರುವ ಬರ ನಿರ್ವಹಣೆ, ನೀರಿನ ಸಮಸ್ಯೆ ನಿವಾರಣೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿಯವರಿಗೆ ಕೋರಲಾಗಿದೆ. ಹೊಸದಾಗಿ ಕೊಳವೆ ಬಾವಿ ಕೊರೆಸಲು ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.