ADVERTISEMENT

ಕೋಲಾರ: ಜಿಲ್ಲೆಗೆ ಮರಳಿದವರ ಬದುಕಿಗೆ ನರೇಗಾ ಆಸರೆ

ಕೊರೊನಾ ಸೋಂಕಿನ ಸಂಕಷ್ಟ: ಕಾರ್ಮಿಕರ ಮಹಾ ವಲಸೆ

ಜೆ.ಆರ್.ಗಿರೀಶ್
Published 17 ಜುಲೈ 2020, 19:30 IST
Last Updated 17 ಜುಲೈ 2020, 19:30 IST
ಕೋಲಾರ ತಾಲ್ಲೂಕಿನ ಅರಹಳ್ಳಿಯ ಕೃಷಿ ಜಮೀನಿನಲ್ಲಿ ನರೇಗಾ ಅಡಿ ನಡೆಯುತ್ತಿರುವ ಬದು ನಿರ್ಮಾಣ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರು.
ಕೋಲಾರ ತಾಲ್ಲೂಕಿನ ಅರಹಳ್ಳಿಯ ಕೃಷಿ ಜಮೀನಿನಲ್ಲಿ ನರೇಗಾ ಅಡಿ ನಡೆಯುತ್ತಿರುವ ಬದು ನಿರ್ಮಾಣ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರು.   

ಕೋಲಾರ: ಕೋವಿಡ್‌–19 ಹಿನ್ನೆಲೆಯಲ್ಲಿ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಜಿಲ್ಲೆಗೆ ಕಾರ್ಮಿಕರ ಮಹಾ ವಲಸೆಯಾಗಿದ್ದು, ನರೇಗಾ ಕೆಲಸಕ್ಕೆ ಬೇಡಿಕೆ ಹೆಚ್ಚಿದೆ.

ಬೆಂಗಳೂರು ಸಮೀಪದಲ್ಲಿರುವ ಕಾರಣ ಜಿಲ್ಲೆಯಿಂದ ಸಾಕಷ್ಟು ಮಂದಿ ತುತ್ತಿನ ಚೀಲ ತುಂಬಿಸಿಕೊಳ್ಳಲು ರಾಜಧಾನಿಗೆ ವಲಸೆ ಹೋಗಿದ್ದರು. ಬಡ ಹಾಗೂ ಮಧ್ಯಮ ವರ್ಗದ ಜನರು, ಸುಶಿಕ್ಷಿತರು, ಅನಕ್ಷರಸ್ಥರು ಹೀಗೆ ಎಲ್ಲಾ ವರ್ಗದ ಜನರು ಬೆಂಗಳೂರಿನಲ್ಲೇ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು.

ಮುಖ್ಯವಾಗಿ ಬಂಗಾರಪೇಟೆ ಮತ್ತು ಕೆಜಿಎಫ್‌ ತಾಲ್ಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದರು. ಆದರೆ, ಮಾರ್ಚ್‌ನಲ್ಲಿ ಲಾಕ್‌ಡೌನ್‌ ಜಾರಿಯಾದ ನಂತರ ವಾಣಿಜ್ಯ ಚಟುವಟಿಕೆಗಳು, ಕೈಗಾರಿಕೆಗಳು ಸ್ಥಗಿತಗೊಂಡವು. ಹೀಗಾಗಿ ದುಡಿಯುವ ಮಂದಿ ಜಿಲ್ಲೆಗೆ ಮರಳಿದ್ದಾರೆ,

ADVERTISEMENT

ಲಾಕ್‌ಡೌನ್‌ ಸಡಿಲಿಕೆ ಬಳಿಕ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿಕೆ ಆಗುತ್ತಿರುವುದರಿಂದ ಕಾರ್ಮಿಕರು ಭಯದಿಂದ ರಾಜಧಾನಿ ತೊರೆದು ಜಿಲ್ಲೆಯತ್ತ ಮುಖ ಮಾಡಿದ್ದಾರೆ. ಇವರ ಬದುಕಿಗೆ ನರೇಗಾ ಯೋಜನೆ ಆಸರೆಯಾಗಿದೆ.

ಸದ್ಯಕ್ಕೆ ಜಿಲ್ಲೆಯ ಪರಿಸ್ಥಿತಿ ಬೆಂಗಳೂರಿಗಿಂತ ವಿಭಿನ್ನವಾಗಿಲ್ಲ. ಕೋವಿಡ್‌–19 ಕಾರಣಕ್ಕೆ ಜಿಲ್ಲೆಯಲ್ಲೂ ಕೈಗಾರಿಕಾ ಚಟುವಟಿಕೆಗಳು, ವಾಣಿಜ್ಯ ವಹಿವಾಟು ನಿರೀಕ್ಷೆಯಂತೆ ನಡೆಯುತ್ತಿಲ್ಲ. ಹೀಗಾಗಿ ವಲಸೆ ಜನರು ಜೀವನ ನಿರ್ವಹಣೆಗಾಗಿ ನರೇಗಾ ಆಶ್ರಯಿಸಿದ್ದಾರೆ.

ಗ್ರಾಮಗಳಲ್ಲಿ ಉಳಿದಿರುವ ಮಾನವ ಸಂಪನ್ಮೂಲದ ಸದ್ಬಳಕೆಗೆ ಮುಂದಾಗಿರುವ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನರೇಗಾ ಕೆಲಸಗಳಿಗೆ ಬರುವಂತೆ ಉತ್ತೇಜನ ನೀಡುತ್ತಿದ್ದಾರೆ. ಮನೆಯಲ್ಲಿರುವ ಜನರು ನರೇಗಾ ಕೆಲಸಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದು, ಜಾಬ್‌ ಕಾರ್ಡ್ ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ.

ಪದವೀಧರರು ಕೆಲಸಕ್ಕೆ: ಜಿಲ್ಲೆಯಲ್ಲಿ 156 ಗ್ರಾಮ ಪಂಚಾಯಿತಿಗಳಿದ್ದು, ಜಿ.ಪಂಗೆ 2020–21ನೇ ಸಾಲಿನಲ್ಲಿ 55.40 ಲಕ್ಷ ಮಾನವ ದಿನ ಸೃಜಿಸುವ ಗುರಿ ನೀಡಲಾಗಿದೆ. ಆದರೆ, ನರೇಗಾ ಕೆಲಸಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಅಧಿಕಾರಿಗಳು ನಿಗದಿತ ಗುರಿಗಿಂತಲೂ ಹೆಚ್ಚು ಮಾನವ ದಿನ ಸೃಜಿಸಲು ಉದ್ದೇಶಿಸಿದ್ದಾರೆ.

ಇದಕ್ಕೆ ಪೂರಕವಾಗಿ ಅಧಿಕಾರಿಗಳು ಪ್ರತಿ ತಿಂಗಳ 3ನೇ ಗುರುವಾರದಂದು ಗ್ರಾಮಗಳಲ್ಲಿ ರೋಜ್‌ಗಾರ್‌ ದಿನ ಆಚರಿಸಿ ನರೇಗಾ ಕಾಮಗಾರಿಯಲ್ಲಿ ತೊಡಗಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮತ್ತೊಂದೆಡೆ ನಗರ ಪ್ರದೇಶದಿಂದ ವಲಸೆ ಬಂದಿರುವ ಯುವಕರು ಸ್ವಇಚ್ಛೆಯಿಂದ ನರೇಗಾ ಕೆಲಸಗಳಿಗೆ ಬರುತ್ತಿದ್ದಾರೆ. ಬಿ.ಇ ಪದವೀಧರರು, ಸ್ನಾತಕೋತ್ತರ ಪದವೀಧರರು ಸಹ ನರೇಗಾ ಕೆಲಸಕ್ಕೆ ಬರುತ್ತಿರುವುದು ವಿಶೇಷವಾಗಿದೆ.

ಜಿಲ್ಲೆಯಲ್ಲಿ ಒಟ್ಟಾರೆ 2,15,380 ಜಾಬ್‌ ಕಾರ್ಡ್‌ಗಳಿದ್ದು, 15 ದಿನಕ್ಕೊಮ್ಮೆ ವೇತನ ಪಾವತಿಸಿ ಕೆಲಸ ಮಾಡಲಾಗುತ್ತಿದೆ. ನರೇಗಾದಲ್ಲಿ ಸದ್ಯ 10,784 ಕಾಮಗಾರಿಗಳು ಪ್ರಗತಿಯಲ್ಲಿವೆ. 3,128 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ.

15 ಸಾವಿರ ಮಂದಿ: ಕೋವಿಡ್‌–19 ಪರಿಸ್ಥಿತಿ ಗಂಭೀರವಾದ ನಂತರ ಕಳೆದ ಮೂರೂವರೆ ತಿಂಗಳಲ್ಲಿ ಸುಮಾರು 4,500 ಮಂದಿ ವಲಸೆ ಕಾರ್ಮಿಕರು ಸೇವಾ ಸಿಂಧು ಆ್ಯಪ್‌ನಲ್ಲಿ ಹೆಸರು ನೋಂದಾಯಿಸಿ ಹೊರ ರಾಜ್ಯಗಳಿಂದ ಜಿಲ್ಲೆಗೆ ಮರಳಿದ್ದಾರೆ. ಇನ್ನೂ ಬೆಂಗಳೂರಿನಿಂದ ಜಿಲ್ಲೆಗೆ ವಾಪಸ್‌ ಬಂದ ಕಾರ್ಮಿಕರ ಸಂಖ್ಯೆಗೆ ಲೆಕ್ಕವಿಲ್ಲ.

ಹೀಗೆ ಜಿಲ್ಲೆಗೆ ಮರಳಿದವರಲ್ಲಿ ಸುಮಾರು 15 ಸಾವಿರ ಮಂದಿ ನರೇಗಾ ಕೆಲಸಗಳಲ್ಲಿ ತೊಡಗಿಸಿಕೊಡಿದ್ದಾರೆ. ಏಪ್ರಿಲ್‌ನಿಂದ ಜುಲೈ 15ರವರೆಗೆ ಹೊಸದಾಗಿ 4,462 ಜಾಬ್‌ ಕಾರ್ಡ್‌ಗಳ ನೋಂದಣಿಯಾಗಿದೆ. ಮುಖ್ಯವಾಗಿ ಕೆರೆಗಳಲ್ಲಿ ಹೂಳು ತೆಗೆಯುವುದು, ಸಸಿ ನೆಡುವುದು, ಜಮೀನುಗಳಲ್ಲಿ ಕೃಷಿ ಹೊಂಡ ಮತ್ತು ಬದು ನಿರ್ಮಾಣ, ಗೋಕುಂಟೆ, ಕಿರು ಕಾಲುವೆ ನಿರ್ಮಾಣದಂತಹ ಕಾಮಗಾರಿ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.