ADVERTISEMENT

11ಕ್ಕೆ ಪಶು ಭವನದ ಎದುರು ಪ್ರತಿಭಟನೆ: ಜಿ.ಸಿ.ಬಯ್ಯಾರೆಡ್ಡಿ

ಕೋಳಿ ಸಾಕಾಣಿಕೆದಾರರ ಬೇಡಿಕೆ ಈಡೇರಿಕೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 15:22 IST
Last Updated 4 ಫೆಬ್ರುವರಿ 2021, 15:22 IST

ಕೋಲಾರ: ‘ರಾಜ್ಯದಲ್ಲಿ ಕೋಳಿ ಸಾಕಾಣಿಕೆ ಸಂಬಂಧ ಜ.11ರಂದು ನಡೆದ ಸರ್ಕಾರ, ಅಧಿಕಾರಿಗಳ ಮತ್ತು ರೈತರ ಸಭೆಯಲ್ಲಿ ಕೈಗೊಂಡ ನಿರ್ಣಯ ಜಾರಿಗೆ ಒತ್ತಾಯಿಸಿ ಸಂಘವು ಬೆಂಗಳೂರಿನ ಪಶು ಭವನದ ಮುಂದೆ ಫೆ.16ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ’ ಎಂದು ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಳಿ ಸಾಕಾಣಿಕೆದಾರರ ಕುಂದು ಕೊರತೆ, ಸಾಧಕ ಭಾದಕಗಳ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಕಂಪನಿಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸುದೀರ್ಘ ಚರ್ಚೆ ನಡೆಸಿ ಹಲವು ನಿರ್ಧಾರ ಕೈಗೊಳ್ಳಲಾಗಿತ್ತು’ ಎಂದರು.

‘ಕೋಳಿ ಸಾಕಾಣಿಕೆ ದರ ಕೆ.ಜಿಗೆ ₹ 7.50 ನಿಗದಿಪಡಿಸಲಾಗಿತ್ತು. ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸಭೆಯ ತೀರ್ಮಾನಗಳನ್ನು ಸರ್ಕಾರದ ಗಮನಕ್ಕೆ ತಂದು ನಿರ್ಣಯ ಜಾರಿಗೆ ಶಿಫಾರಸು ಮಾಡಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಹೋರಾಟ ಅನಿವಾರ್ಯವಾಗಿದೆ’ ಎಂದು ಹೇಳಿದರು.

ADVERTISEMENT

‘ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ವರದಿನ್ವಯ ಕೋಳಿ ಸಾಕಾಣಿಕೆ ದರದ ಬಗ್ಗೆ ಶಾಶ್ವತ ಪರಿಹಾರ ಸೂತ್ರ ಅಂತಿಮಗೊಳಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಿ ಕೆ.ಜಿಗೆ ₹ 7.50 ನೀಡಲು ಸಮ್ಮತಿಸಿದ್ದ ಕಂಪನಿಗಳ ಪ್ರತಿನಿಧಿಗಳು ಸರ್ಕಾರದ ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿ ಹಿಂದಿನಂತೆಯೇ ಕೆ.ಜಿಗೆ ₹ 4 ಸಾಕಾಣಿಕೆ ದರ ನೀಡುತ್ತಿವೆ. ಇದರಿಂದ ಸಾಕಾಣಿಕೆದಾರರ ನಷ್ಟವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿ ಉದ್ಯಮವಾಗಲಿ: ‘ಕೋಳಿ ಉದ್ಯಮವನ್ನು ಕೃಷಿ ಉದ್ಯಮವಾಗಿ ಪರಿಗಣಿಸಬೇಕು. ಕೃಷಿ ವಲಯಕ್ಕೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಕೋಳಿ ಸಾಕಾಣಿಕೆ ಉದ್ಯಮದವರಿಗೆ ನೀಡಬೇಕು. ಸಾಲ, ಸಹಾಯಧನ, ಕಡಿಮೆ ದರದಲ್ಲಿ ಪಶು ಆಹಾರ ಪೂರೈಕೆ ಬೇಡಿಕೆ ಈಡೇರಿಸಬೇಕು. ಈ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಗಮನ ಹರಿದಿರುವುದು ವಿಷಾದನೀಯ’ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಸಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಿ.ಎಂ.ರಮೇಶ್, ಉಪಾಧ್ಯಕ್ಷ ರಾಮಕೃಷ್ಣೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ.ಮುನಿವೆಂಕಟೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.