ಬಂಗಾರಪೇಟೆ: ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದೋಣಿಮಡಗು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮಸಭೆ ಮತ್ತು ಕುಂದುಕೊರತೆಗಳ ಸಭೆ ಉದ್ಘಾಟಿಸಿ ಮಾತನಾಡಿದರು. ಬಡವರು, ಕೂಲಿ ಕಾರ್ಮಿಕರು, ರೈತರು ಹಾಗೂ ಮಹಿಳೆಯರಿಗೆ ಸರ್ಕಾರದ ಯೋಜನೆಗಳ ಕುರಿತ ಅರಿವು ಮೂಡಿಸುವ ಸಲುವಾಗಿ ಮತ್ತು ಗ್ರಾಮಗಳಲ್ಲಿ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರವನ್ನು ಕಲ್ಪಿಸುವ ಉದ್ದೇಶದಿಂದ ಗ್ರಾಮ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆ ಅಭಿವೃದ್ಧಿ ಗ್ಯಾರಂಟಿಯನ್ನೂ ನೀಡಿದೆ. ಗಡಿಭಾಗದಲ್ಲಿ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರಿನ ಘಟಕಗಳು, ಸಿಸಿ ರಸ್ತೆಗಳ ನಿರ್ಮಾಣ, ಚರಂಡಿಗಳ ಸ್ವಚ್ಚತೆ ಮತ್ತು ನಿರ್ಮಾಣ, ಸಮುದಾಯದ ಶೌಚಾಲಯಗಳ ನಿರ್ಮಾಣ, ಹೈಮಾಸ್ ದೀಪಗಳ ಅಳವಡಿಕೆ ಕಲ್ಪಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನಿರಂತರ ಶ್ರಮಿಸಲಾಗುತ್ತಿದೆ ಎಂದರು.
ಮುಷ್ಟ್ರಹಳ್ಳಿ ಗ್ರಾಮದಿಂದ ಬಿಸಾನತ್ತ ರೈಲ್ವೆ ನಿಲ್ದಾಣದವರೆಗೆ ರಸ್ತೆ ನಿರ್ಮಾಣ ಮಾಡಲು ₹1.20 ಕೋಟಿ ಲಕ್ಷ ಮಂಜೂರು ಮಾಡಲಾಗಿದೆ. ಮುಷ್ಟ್ರಹಳ್ಳಿ ಜಲಾಶಯಕ್ಕೆ ಪುನಶ್ಚೇತನ ನೀಡಲು ₹2 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಕುಂದರಸನಹಳ್ಳಿ ಗ್ರಾಮದಲ್ಲಿ ಸಮುದಾಯದ ಭವನ ನಿರ್ಮಿಸಲು ₹40 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿಯೇ ನಿದಿಪಡಿಸಲಾವುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಎಸ್.ಕೆ. ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ತೊಪ್ಪನಹಳ್ಳಿ ಗ್ರಾ.ಪಂ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ಬಲಮಂದೆ ಗ್ರಾ.ಪಂ ಅಧ್ಯಕ್ಷ ಸರಸ್ವತಿ ರಾಮಶೆಟ್ಟಿ, ಗ್ರಾ.ಪಂ ಸದಸ್ಯರಾದ ಭತ್ತ್ಯಪ್ಪ, ಎಂ.ವಿ. ಸಂತೋಷ, ಕೃಷ್ಣಪ್ಪ, ಎಂ.ಟಿ. ರಾಜಪ್ಪ, ವೆಂಕಟಪ್ಪ, ಬಸಪ್ಪ, ಚೆಂಗಲರಾಯರೆಡ್ಡಿ, ನಾಗಲ ಮುದ್ದಮ್ಮ, ವೆಂಕಟಲಕ್ಷ್ಮಮ್ಮ ತಿಮ್ಮಪ್ಪ, ನಾರಾಯಣಸ್ವಾಮಿ, ರಾಧಾ ವೆಂಕಟೇಶ್, ಬಿ.ವಿ. ಶಂಕರ್, ಪಾರ್ಥಸಾರಥಿ, ರಂಗಾಚಾರಿ, ಶಂಕರೇಗೌಡ, ವರದರಾಜು, ಶಿವಕುಮಾರ್, ಮುನೀರಪ್ಪ, ವಸಂತ ಕುಮಾರ್, ಚಿನ್ನಪ್ಪಯ್ಯ, ಸಂಪಂಗಿ, ಮುನಿಕೃಷ್ಣ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾ.ಪಂ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.