ADVERTISEMENT

ಜಿಲ್ಲೆಯ 3 ನಗರಸಭೆ ಚುನಾವಣೆಗೆ ಅಸ್ತು

ಹೈಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥ: ಚುನಾವಣಾ ಸಿದ್ಧತೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 12:10 IST
Last Updated 14 ಸೆಪ್ಟೆಂಬರ್ 2019, 12:10 IST

ಕೋಲಾರ: ಜಿಲ್ಲೆಯ 3 ನಗರಸಭೆಗಳಿಗೆ ಚುನಾವಣೆ ನಡೆಸಲು ಕೊನೆಗೂ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ. ಜಿಲ್ಲೆಯ ಕೋಲಾರ, ಮುಳಬಾಗಿಲು ಹಾಗೂ ರಾಬರ್ಟ್‌ಸನ್‌ಪೇಟೆ (ಕೆಜಿಎಫ್‌) ನಗರಸಭೆಗೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಆಯೋಗವು ಜಿಲ್ಲಾಡಳಿತಕ್ಕೆ ಶುಕ್ರವಾರ ಆದೇಶ ನೀಡಿದೆ.

ಈ ಮೂರೂ ನಗರಸಭೆಗಳ ಚುನಾಯಿತ ಆಡಳಿತ ಮಂಡಳಿಯ ಅಧಿಕಾರಾವಧಿ ಮಾರ್ಚ್‌ನಲ್ಲೇ ಮುಗಿದಿತ್ತು. ಹೀಗಾಗಿ ಆಯೋಗವು ಲೋಕಸಭಾ ಚುನಾವಣೆಗೂ ಮುನ್ನವೇ ಜಿಲ್ಲೆಯ ಮಾಲೂರು, ಶ್ರೀನಿವಾಸಪುರ, ಬಂಗಾರಪೇಟೆ ಪುರಸಭೆ ಹಾಗೂ ಈ ಮೂರೂ ನಗರಸಭೆಗಳಿಗೆ ಚುನಾವಣೆ ನಡೆಸಲು ಮುಂದಾಗಿತ್ತು.

ಆದರೆ, ಕೋಲಾರ, ಮುಳಬಾಗಿಲು ಮತ್ತು ರಾಬರ್ಟ್‌ಸನ್‌ಪೇಟೆ ನಗರಸಭೆ ವ್ಯಾಪ್ತಿಯ ವಾರ್ಡ್‌ವಾರು ಮೀಸಲಾತಿ ಹಾಗೂ ವಾರ್ಡ್‌ ಪುನರ್‌ ವಿಂಗಡಣೆ ಸಂಬಂಧ ಕೆಲವರು ಹೈಕೋರ್ಟ್‌ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ಈ ಕಾರಣದಿಂದಾಗಿ ಆಯೋಗವು ಮೂರೂ ನಗರಸಭೆಗಳನ್ನು ಹೊರತುಪಡಿಸಿ ಬಂಗಾರಪೇಟೆ, ಶ್ರೀನಿವಾಸಪುರ ಮತ್ತು ಮಾಲೂರು ಪುರಸಭೆಗೆ ಮೇ ತಿಂಗಳಲ್ಲಿ ಚುನಾವಣೆ ನಡೆಸಿತ್ತು.

ADVERTISEMENT

ಆಕ್ಷೇಪಣಾ ಅರ್ಜಿ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಸರ್ಕಾರ ಮೂರೂ ನಗರಸಭೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿತ್ತು. ಇದೀಗ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡಿದ್ದು, ಆಯೋಗವು ಚುನಾವಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಕೋಲಾರ ಹಾಗೂ ರಾಬರ್ಟ್‌ಸನ್‌ಪೇಟೆ ನಗರಸಭೆಯ ತಲಾ 35 ವಾರ್ಡ್ ಮತ್ತು ಮುಳಬಾಗಿಲು ನಗರಸಭೆಯ 31 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, ಸದ್ಯದಲ್ಲೇ ದಿನಾಂಕ ಘೋಷಣೆಯಾಗಲಿದೆ.

ಸಿದ್ಧತೆಗೆ ನಿರ್ದೇಶನ: ಮತದಾರರ ಪಟ್ಟಿ, ಮತಗಟ್ಟೆಗಳ ಪಟ್ಟಿ, ಮತಗಟ್ಟೆಗಳಿಗೆ ಸಿಬ್ಬಂದಿ ನಿಯೋಜನೆ, ವಿದ್ಯುನ್ಮಾನ ಮತದಾನ ಯಂತ್ರಗಳ (ಇವಿಎಂ) ಸಂಗ್ರಹಣೆ, ಚುನಾವಣಾಧಿಕಾರಿಗಳ ನೇಮಕ, 6ರಿಂದ 8 ವಾರ್ಡ್‌ಗಳಿಗೆ ಒಬ್ಬರಂತೆ ಉಪ ವಿಭಾಗಾಧಿಕಾರಿ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸುವುದು, ಪ್ರತಿ ಚುನಾವಣಾಧಿಕಾರಿಗೆ ತಹಶೀಲ್ದಾರ್‌ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸುವುದು ಸೇರಿದಂತೆ ಚುನಾವಣೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಆಯೋಗವು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.

ಅಭ್ಯರ್ಥಿಗಳ ಚುನಾವಣಾ ವೆಚ್ಚ ಪರಿಶೀಲನೆಗೆ ಅಧಿಕಾರಿಗಳ ನೇಮಕ, ಮತಗಟ್ಟೆಗಳು ಗುರುತು ಸೀಲು ತಯಾರಿಕೆ, ಚುನಾವಣಾ ಸಾಮಗ್ರಿ ಸಂಗ್ರಹಣೆ, ಚುನಾವಣಾ ಪ್ರಕ್ರಿಯೆಗೆ ಅಗತ್ಯವಿರುವ ಅನುದಾನಕ್ಕೆ ಪ್ರಸ್ತಾವ ಸಲ್ಲಿಸುವಂತೆ ಆಯೋಗವು ಜಿಲ್ಲಾಡಳಿತಕ್ಕೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.