ADVERTISEMENT

ಚಾಲಕ– ಭದ್ರತಾ ಸಿಬ್ಬಂದಿಗೆ ಸೋಂಕು

ಜಿಲ್ಲೆಯಲ್ಲಿ ಏರುಗತಿಯಲ್ಲಿ ಸಾಗಿದ ಕೊರೊನಾ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 24 ಮೇ 2020, 16:07 IST
Last Updated 24 ಮೇ 2020, 16:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲಾರ: ಲಾಕ್‌ಡೌನ್‌ ಸಡಿಲಿಕೆವರೆಗೂ ಹಸಿರು ವಲಯದಲ್ಲಿದ್ದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಭಾನುವಾರ ಮತ್ತೆ ಇಬ್ಬರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಈವರೆಗೆ ಸೋಂಕು ಮುಕ್ತವಾಗಿದ್ದ ಶ್ರೀನಿವಾಸಪುರ ತಾಲ್ಲೂಕಿಗೂ ಸೋಂಕು ಕಾಲಿಟ್ಟಿದೆ. ಶ್ರೀನಿವಾಸಪುರ ಪಟ್ಟಣದ ಈಚಲಕುಂಟೆ ಕೆರೆ ಪ್ರದೇಶದ 60 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.

ಸೋಂಕಿತ ವ್ಯಕ್ತಿಯು ಶ್ರೀನಿವಾಸಪುರ ಬಳಿಯ ಮಾವು ಸಂಸ್ಕರಣಾ ಘಟಕದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು. ಆಂಧ್ರಪ್ರದೇಶದ ವಿ.ಕೋಟ ಬಳಿಯ ಪುಂಗನೂರಿನ ಸೋಂಕಿತ ಟೊಮೆಟೊ ವ್ಯಾಪಾರಿಯೊಬ್ಬರು ಮೇ 6ರಂದು ಆ ಮಾವು ಸಂಸ್ಕರಣಾ ಘಟಕಕ್ಕೆ ಬಂದು ಹೋಗಿದ್ದರು. ಘಟಕದ ಭದ್ರತಾ ಸಿಬ್ಬಂದಿ ಹಾಗೂ ಕಾರ್ಮಿಕರು ಸೇರಿದಂತೆ 40 ಮಂದಿಯು ಆ ಸೋಂಕಿತ ವ್ಯಕ್ತಿಯು ಸಂಪರ್ಕಕ್ಕೆ ಬಂದಿದ್ದರು.

ADVERTISEMENT

ಹೀಗಾಗಿ ಅವರೆಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿತ್ತು. ಈ ಪೈಕಿ ಭದ್ರತಾ ಸಿಬ್ಬಂದಿಗೆ ಸೋಂಕು ತಗುಲಿರುವುದಾಗಿ ಭಾನುವಾರ ರಾತ್ರಿ ಪ್ರಯೋಗಾಲಯದ ವರದಿ ಬಂದಿದೆ.

6ಕ್ಕೇರಿದ ಸೋಂಕಿತರು: ಮುಳಬಾಗಿಲು ನಗರದ ತಾತಿಪಾಳ್ಯ ಬಡಾವಣೆಯ 34 ವರ್ಷದ ಲಾರಿ ಚಾಲಕರೊಬ್ಬರು ಕೊರೊನಾ ಸೋಂಕು ಪೀಡಿತರಾಗಿರುವುದು ಭಾನುವಾರ ರಾತ್ರಿ ಗೊತ್ತಾಗಿದೆ. ಇವರು ಇತ್ತೀಚೆಗೆ ತಮಿಳುನಾಡಿನ ಚೆನ್ನೈಗೆ ಹೋಗಿ ಬಂದಿದ್ದರು. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿಯು ಇವರನ್ನು ಕ್ವಾರಂಟೈನ್‌ ಮಾಡಿದ್ದರು.

ಅಲ್ಲದೇ, ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇವರಿಗೆ ಕೊರೊನಾ ಸೋಂಕು ಇರುವುದಾಗಿ ಪ್ರಯೋಗಾಲಯದ ವರದಿ ಬಂದಿದೆ. ಇದರೊಂದಿಗೆ ಮುಳಬಾಗಿಲು ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ತಲುಪಿದೆ.

ಶ್ರೀನಿವಾಸಪುರ ಮತ್ತು ತಾತಿಪಾಳ್ಯದ ಸೋಂಕಿತರ ಜತೆಗೆ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಪತ್ತೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಈಚಲಕುಂಟೆ ಕೆರೆ ಪ್ರದೇಶ ಮತ್ತು ತಾತಿಪಾಳ್ಯವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸೀಲ್‌ಡೌನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.