ADVERTISEMENT

ಕಾಲುಬಾಯಿ ಜ್ವರದ ಲಸಿಕೆ ಖರೀದಿಗೆ ಅನುದಾನ ಸ್ಥಗಿತ: ಕೈಚೆಲ್ಲಿದ ಕೇಂದ್ರ ಸರ್ಕಾರ

ಜೆ.ಆರ್.ಗಿರೀಶ್
Published 20 ಸೆಪ್ಟೆಂಬರ್ 2021, 21:15 IST
Last Updated 20 ಸೆಪ್ಟೆಂಬರ್ 2021, 21:15 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಕೋಲಾರ: ಜಿಲ್ಲೆಯ ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಉಲ್ಬಣಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ.

ಹೈನುಗಾರಿಕೆಯು ಜಿಲ್ಲೆಯ ಜೀವನಾಡಿಯಾಗಿದ್ದು, ಬಹುಪಾಲು ರೈತರು ಕೃಷಿಯ ಜತೆಗೆ ಉಪ ಕಸುಬಾಗಿ ಜಾನುವಾರು ಸಾಕಿದ್ದಾರೆ. ಹೈನೋದ್ಯಮವು ರೈತರ ಪ್ರಮುಖ ಆದಾಯ ಮೂಲವಾಗಿದ್ದು, ರೈತರು ಹಸು ಹಾಗೂ ಎಮ್ಮೆ ಹಾಲನ್ನು ಡೇರಿಗೆ ಹಾಕಿ ಅದರಿಂದ ಬರುವ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಜಿಲ್ಲೆ ಸೇರಿದಂತೆ ರಾಜ್ಯಕ್ಕೆ ಕಳೆದ ಒಂದೂವರೆ ವರ್ಷದಿಂದ ಕಾಲುಬಾಯಿ ಜ್ವರದ ಲಸಿಕೆ ಪೂರೈಕೆ ಸ್ಥಗಿತಗೊಂಡಿದ್ದು, ರಾಸುಗಳಿಗೆ ಲಸಿಕೆ ಹಾಕಿಲ್ಲ. ಹೀಗಾಗಿ ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ದಿನದಿಂದ ದಿನಕ್ಕೆ ರೋಗ ಹರಡುವಿಕೆ ಹೆಚ್ಚುತ್ತಿದೆ.

ADVERTISEMENT

ಕಾಲುಗಳಲ್ಲಿ ಗೊರಸಲು ಹೊಂದಿರುವ ದನ, ಎಮ್ಮೆ ಮತ್ತು ಹಂದಿಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಈ ರೋಗ ಬರುತ್ತದೆ. 2013ರಲ್ಲಿ ಹಾಗೂ 2017ರಲ್ಲಿ ಜಿಲ್ಲೆಯ ವಿವಿಧೆಡೆ ಹಸು, ಕರು ಹಾಗೂ ಎಮ್ಮೆ ಸೇರಿದಂತೆ ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿತ್ತು.

ಈ ಹಿಂದೆ ರಾಷ್ಟ್ರೀಯ ಕಾಲುಬಾಯಿ ಜ್ವರ ರೋಗ ನಿಯಂತ್ರಣ ಯೋಜನೆಯಡಿ (ಎಫ್‌ಎಂಡಿಸಿಪಿ) ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಮೂಲಕ ಪ್ರತಿ ವರ್ಷ 6 ತಿಂಗಳ ಅಂತರದಲ್ಲಿ ಜಾನುವಾರುಗಳಿಗೆ 2 ಬಾರಿ ಕಾಲುಬಾಯಿ ಜ್ವರದ ಲಸಿಕೆ ಹಾಕಲಾಗುತ್ತಿತ್ತು.

ಆದರೆ, 2020ರಿಂದ ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಯೋಜನೆಯಡಿ (ಎನ್‌ಎಡಿಸಿಪಿ) ಈ ಲಸಿಕೆ ಹಾಕುವ ಅಭಿಯಾನ ಆರಂಭಿಸಲಾಯಿತು. ಹಿಂದಿನ ವರ್ಷ ಅಭಿಯಾನಕ್ಕೆ ಪೂರೈಕೆಯಾದ ಲಸಿಕೆ ಗುಣಮಟ್ಟ ಉತ್ತಮವಾಗಿರದ ಕಾರಣ ರಾಜ್ಯದೆಲ್ಲೆಡೆ ಲಸಿಕೆಗಳನ್ನು ನಾಶಪಡಿಸಲಾಯಿತು. ಆ ನಂತರ ಒಂದೂವರೆ ವರ್ಷದಿಂದ ಲಸಿಕೆ ಖರೀದಿಗೆ ಕೇಂದ್ರವು ಅನುದಾನ ಕೊಟ್ಟಿಲ್ಲ. ಈ ಕಾರಣಕ್ಕೆ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಲಸಿಕೆ ಖರೀದಿ ನಿಲ್ಲಿಸಿದೆ.

ಲಕ್ಷಣಗಳು: ‘ಪಿಕೊರ್ನಾ’ ವೈರಸ್‌ನಿಂದ ಬರುವ ಕಾಲುಬಾಯಿ ಜ್ವರವು ಸಾಂಕ್ರಾಮಿಕ ರೋಗವಾಗಿದೆ. ಈ ಸೋಂಕಿಗೆ ತುತ್ತಾದ ಜಾನುವಾರುಗಳ ಗೊರಸಲು ಹಾಗೂ ಬಾಯಿಯ ಭಾಗದಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತಿವೆ. ಬಾಯಿಯಲ್ಲಿನ ಚಿಕ್ಕ ನೀರ್ಗುಳ್ಳೆಗಳು ಒಡೆದು, ಜಾನುವಾರು ಜೊಲ್ಲು ಸುರಿಸುತ್ತಿವೆ. ಗೊರಸಲು ಭಾಗದಲ್ಲಿ ಹುಣ್ಣು ಹೆಚ್ಚಾಗಿ ಜಾನುವಾರುಗಳು ಕುಂಟುತ್ತಿವೆ. ಜತೆಗೆ ಜಾನುವಾರುಗಳಿಗೆ ೧೦೬ರಿಂದ ೧೦೮ ಫ್ಯಾರನ್‌ ಹೀಟ್‌ ಜ್ವರ ಬರುತ್ತಿದೆ.

ರೋಗಕ್ಕೆ ತುತ್ತಾದ ಜಾನುವಾರುಗಳು ಮೇವು ತಿನ್ನುತ್ತಿಲ್ಲ ಮತ್ತು ನೀರು ಕುಡಿಯುತ್ತಿಲ್ಲ. ಈ ಸೋಂಕು ಜಾನುವಾರಿನಿಂದ ಮತ್ತೊಂದು ಜಾನುವಾರಿಗೆ ಗಾಳಿ, ನೀರು, ಮೇವಿನ ಮೂಲಕ ಹರಡುತ್ತಿದೆ. ಸೋಂಕು ನಾಯಿ ರೋಗಕ್ಕೆ ತಿರುಗಿ ಜಾನುವಾರುಗಳ ದೇಹ ಸ್ಥಿತಿ ಗಂಭೀರವಾಗುತ್ತಿದೆ.

ಹಾಲು ಕಡಿಮೆ: ಕಾಲುಬಾಯಿ ಜ್ವರದಿಂದ ಹಸು, ಎಮ್ಮೆ, ಕುರಿ, ಮೇಕೆಗಳಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗುತ್ತಿದೆ. ಸೋಂಕು ನಾಯಿ ರೋಗಕ್ಕೆ ತಿರುಗಿದರೆ ಜಾನುವಾರು ಗರ್ಭ ಧರಿಸುವ ಸಾಧ್ಯತೆ ಕಡಿಮೆ. ಪದೇ ಪದೇ ಗರ್ಭಧಾರಣೆ ಮಾಡಿಸಿದರೂ ಗರ್ಭ ನಿಲ್ಲುವುದಿಲ್ಲ. ಹಂದಿ, ಕುರಿ ಹಾಗೂ ಮೇಕೆಗಳಿಗೆ ಈ ಸೋಂಕು ತಗುಲಿದರೆ ಮಾಂಸದ ಗುಣಮಟ್ಟ ಕುಸಿದು ದರ ಕಡಿಮೆಯಾಗುವ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.