ADVERTISEMENT

16ಕ್ಕೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಸಾರ್ವಜನಿಕರು ಪ್ರಯೋಜನ ಪಡೆಯಿರಿ: ಪತ್ರಿಕಾಗೋಷ್ಠಿಯಲ್ಲಿ ಡಿಎಚ್‌ಒ ಮನವಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 14:21 IST
Last Updated 13 ಫೆಬ್ರುವರಿ 2019, 14:21 IST

ಕೋಲಾರ: ‘ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಫೆ.16ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್ ಮನವಿ ಮಾಡಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಸರ್ಕಾರಿ ಮಹಿಳಾ ಕಾಲೇಜು ಆವರಣದಲ್ಲಿ ಬೆಳಿಗ್ಗೆ 10ಕ್ಕೆ ಆಯೋಜಿಸಲಾಗಿದೆ’ ಎಂದರು.

‘ಕೇಂದ್ರ ಸರ್ಕಾರದ ಆದೇಶದನ್ವಯ ಶಿಬಿರ ನಡೆಸಲಾಗುತ್ತಿದೆ. ಇನ್ನು ಮುಂದೆ ಪ್ರತಿ ವರ್ಷ ಶಿಬಿರ ಆಯೋಜಿಸಲಾಗುತ್ತದೆ. ಶಿಬಿರದ ಸ್ಥಳದಲ್ಲೇ ಬೆಳಿಗ್ಗೆ 9ಕ್ಕೆ ನೊಂದಣಿ ಕಾರ್ಯ ಆರಂಭವಾಗಲಿದ್ದು, ಸಂಜೆ 6ರವರೆಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸುವುದು ಶಿಬಿರದ ಉದ್ದೇಶ’ ಎಂದು ವಿವರಿಸಿದರು.

ADVERTISEMENT

‘ಸ್ತ್ರೀರೋಗ, ಶಸ್ತ್ರಚಿಕಿತ್ಸೆ, ಕೀಲು ಮತ್ತು ಮೂಳೆ, ತಾಯಿ ಮತ್ತು ಮಕ್ಕಳ, ಕಿವಿ, ಗಂಟಲು, ಕಣ್ಣು, ಚರ್ಮ ಹಾಗೂ ದಂತ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಶಿಬಿರದಲ್ಲಿ ತಜ್ಞರು ಲಭ್ಯರಿರುತ್ತಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಆರೋಗ್ಯ ಕರ್ನಾಟಕ ಯೋಜನೆಯಡಿ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯ ಜನಸಂಖ್ಯೆಗೆ ಹೊಲಿಸಿದರೆ ಶೇ 10ರಷ್ಟು ಮಂದಿ ಮಧುಮೇಹ, ಶೇ 8ರಷ್ಟು ಮಂದಿ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಗುಣಮುಖರಾಗುತ್ತಿಲ್ಲ. ಆರ್‌.ಎಲ್.ಜಾಲಪ್ಪ ಆಸ್ಪತ್ರೆ, ಇಸ್ಟ್ ಪಾಯಿಂಟ್, ವೈದೇಹಿ ಆಸ್ಪತ್ರೆ ತಜ್ಞ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡುತ್ತಾರೆ’ ಎಂದು ಹೇಳಿದರು.

ಜನಪ್ರತಿನಿಧಿಗಳು ಭಾಗಿ: ‘ಆರೋಗ್ಯ ಸಚಿವ ಶಿವಾನಂದ ಎಸ್.ಪಾಟೀಲ್ ಶಿಬಿರ ಉದ್ಘಾಟಿಸುತ್ತಾರೆ. ಶಾಸಕ ಕೆ.ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸುತ್ತಾರೆ. ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸುತ್ತಾರೆ’ ಎಂದು ತಿಳಿಸಿದರು.

ಸುವರ್ಣಾವಕಾಶ: ‘ಮೊದಲ ಹಂತದಲ್ಲಿ ವೈದ್ಯರು ಪರೀಕ್ಷಿಸಿ ಅಸಾಂಕ್ರಾಮಿಕ ರೋಗಿಗಳನ್ನು ಗುರುತಿಸುತ್ತಾರೆ. ಬದಲಾಗುತ್ತಿರುವ ಆಹಾರ ಪದ್ಧತಿಯಿಂದ ಅಸಾಂಕ್ರಾಮಿಕ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ವಿವಿಧ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ ಎಂಬ ಸಂಗತಿ ಗ್ರಾಮೀಣ ಜನರಿಗೆ ಗೊತ್ತಿಲ್ಲ. ಸ್ವಯಂಪ್ರೇರಿತರಾಗಿ ಶಿಬಿರಕ್ಕೆ ಬಂದು ದೇಹದಲ್ಲಿನ ನ್ಯೂನತೆ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಲು ಇದು ಸುವರ್ಣಾವಕಾಶ’ ಎಂದರು.

ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಭಾರತಿ, ವೈದ್ಯಾಧಿಕಾರಿ ಡಾ.ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.