ಕೋಲಾರ: ಡಿಸಿಸಿ ಬ್ಯಾಂಕ್ ಹಾಗೂ ಕೋಲಾರ ಹಾಲು ಒಕ್ಕೂಟದ ಆಡಳಿತ ಮಂಡಳಿತ ನಿರ್ದೇಶಕರ ಚುನಾವಣೆ ಬಳಿಕ ಜಿಲ್ಲೆಯಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಬಣದ ನಾಯಕರು ಬಹಳ ಚುರುಕಾಗಿದ್ದಾರೆ. ರಾಜ್ಯಮಟ್ಟದಲ್ಲಿ ಲಾಬಿ ಆರಂಭಿಸಿದ್ದು, ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನ ಅಥವಾ ಸಚಿವ ಸ್ಥಾನಕ್ಕೆ ಪಟ್ಟು ಹಿಡಿಯುತ್ತಿದ್ದಾರೆ.
ಇತ್ತ ಘಟಬಂಧನ್ (ಕೆ.ಆರ್.ರಮೇಶ್ ಕುಮಾರ್ ಬಣ) ನಾಯಕರು ಅಲ್ಪ ಮೌನಕ್ಕೆ ಶರಣಾದಂತಿದ್ದು, ಒಳಗೊಳಗೆ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.
ಈಗಾಗಲೇ ಡಿಸಿಸಿ ಬ್ಯಾಂಕ್ ಹಾಗೂ ಕೋಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರೇ ಅಧಿಕ ಸ್ಥಾನ ಗೆದ್ದಿದ್ದಾರೆ. ಹೀಗಾಗಿ, ಎರಡೂ ಸಂಸ್ಥೆಗಳ ಅಧ್ಯಕ್ಷ ಸ್ಥಾನದ ಮೇಲೆ ಘಟಬಂಧನ್ ಹಾಗೂ ಮುನಿಯಪ್ಪ ಬಣದ ನಿರ್ದೇಶಕರು ಕಣ್ಣಿಟ್ಟಿದ್ದಾರೆ.
ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಎರಡೂ ಸಂಸ್ಥೆಗಳ ಚುನಾವಣೆಗಳಲ್ಲಿ ತಮ್ಮ ಬಣ ಮೇಲುಗೈ ಸಾಧಿಸಿದೆ ಎಂಬುದಾಗಿ ಹೇಳಿಕೊಂಡು ಮುನಿಯಪ್ಪ ಬೆಂಬಲಿತರು ಓಡಾಡುತ್ತಿದ್ದಾರೆ. ತಮ್ಮ ಬಣದ ನಿರ್ದೇಶಕರು ಹೆಚ್ಚು ಮಂದಿ ಗೆದ್ದಿದ್ದಾರೆ ಎಂದು ಘಟಬಂಧನ್ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ.
ಕೋಮುಲ್ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಮಾರನೇ ದಿನವೇ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಲಾಬಿ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಆಕಾಂಕ್ಷೆ ಹೇಳಿಕೊಂಡಿದ್ದಾರೆ. ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ.
ಮತ್ತೊಂದು ಕಡೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಮರು ಆಯ್ಕೆಯಾಗಿರುವ ಕೆಜಿಎಫ್ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್ ಕೂಡ ಬ್ಯಾಂಕ್‌ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಇತ್ತ ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್, ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕೂಡ ಕಣ್ಣಿಟ್ಟಿದ್ದಾರೆ. ನಾಲ್ಕು ಕ್ಷೇತ್ರಗಳ ಚುನಾವಣೆ ಫಲಿತಾಂಶ ವಿಚಾರ ನ್ಯಾಯಾಲಯದಲ್ಲಿದ್ದು, ಇನ್ನಷ್ಟೇ ಪ್ರಕಟವಾಗಬೇಕಿದೆ. ಒಟ್ಟು 18 ನಿರ್ದೇಶಕರ ಸ್ಥಾನಗಳಲ್ಲಿ ಸದ್ಯ ಕಾಂಗ್ರೆಸ್ ಬೆಂಬಲಿತರು (ಗೋವಿಂದಗೌಡ ಸೇರಿ) 10 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕೋಮುಲ್ ಅಧ್ಯಕ್ಷ ಗಾದಿ ಮೇಲೆ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಕಣ್ಣಿಟ್ಟಿದ್ದಾರೆ. ಒಟ್ಟು 13 ನಿರ್ದೇಶಕರ ಪೈಕಿ ‘ಕೈ’ ಬೆಂಬಲಿತ 9 ನಿರ್ದೇಶಕರು ಗೆದ್ದಿದ್ದಾರೆ. ನಂಜೇಗೌಡ ಮೂರನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಎರಡನೇ ಬಾರಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ.
ಅಧ್ಯಕ್ಷ ಸ್ಥಾನದ ಮೇಲೆ ಮುನಿಯಪ್ಪ ಬಣದವರು ಕಣ್ಣಿಡಲು ಬಲವಾದ ಕಾರಣವೂ ಇದೆ. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಹಾಗೂ ಕೋಮುಲ್ ನಿರ್ದೇಶಕರ ಚುನಾವಣೆಯಲ್ಲಿ ಪ್ರತಿಪಕ್ಷ ಜೆಡಿಎಸ್–ಬಿಜೆಪಿ ನೀಡಿದ ಹೋರಾಟಕ್ಕಿಂತ ‘ಕೈ’ ಬಣಗಳ ನಡುವೆ ಸೃಷ್ಟಿಯಾದ ಜಿದ್ದಾಜಿದ್ದಿಯೇ ದೊಡ್ಡ ಸುದ್ದಿ ಮಾಡಿತು. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಘಟಬಂಧನ್ ಎದುರು ಹಾಕಿಕೊಂಡು ಬ್ಯಾಲಹಳ್ಳಿ ಗೋವಿಂದಗೌಡ ಗೆದ್ದಿರುವುದು, ಈಚೆಗೆ ಕೋಮುಲ್ ಚುನಾವಣೆಯಲ್ಲಿ ಘಟಬಂಧನ್ ಎದುರು ಹಾಕಿಕೊಂಡು ಎಸ್.ಎನ್.ನಾರಾಯಣಸ್ವಾಮಿ ಹಾಗೂ ಮಹಾಲಕ್ಷ್ಮಿ ಗೆದ್ದಿರುವುದು ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ಮಹಾಲಕ್ಷ್ಮಿ ಅವರನ್ನು ಮಣಿಸಲು ಘಟಬಂಧನ್ ಶಾಸಕರು ಬಹಳ ಪ್ರಯತ್ನಪಟ್ಟಿದ್ದರು. ಮುನಿಯಪ್ಪ ಬಣದವರನ್ನು ಬಹಿರಂಗವಾಗಿಯೇ ಏಳೆಂಟು ಮಂದಿಯ ಗ್ಯಾಂಗ್ ಎಂದು ಕೊತ್ತೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದರು. ಇತ್ತ ತಮ್ಮನ್ನು ಕೋಮುಲ್‌ಗೆ ಬಾರದಂತೆ ಘಟಬಂಧನ್ ನಾಯಕರು ತಡೆಯುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದರು.
ಕಾಂಗ್ರೆಸ್‌ನ ಎರಡೂ ಬಣಗಳ ಮುಖಂಡರು ಮತ್ತೊಂದು ಹೋರಾಟಕ್ಕೆ ಸಜ್ಜಾಗುತ್ತಿದ್ದು, ಜಿಲ್ಲೆಯ ರಾಜಕೀಯ ತೀವ್ರ ಕುತೂಹಲ ಮೂಡಿಸಿದೆ.
ಕಾಂಗ್ರೆಸ್‌ನ ಎರಡೂ ಬಣಗಳಿಂದ ತಂತ್ರಗಾರಿಕೆ ತೀವ್ರ ಕುತೂಹಲ ಮೂಡಿಸಿ ಜಿಲ್ಲೆಯ ‘ಕೈ’ ರಾಜಕೀಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಕೊತ್ತೂರು ಮಂಜುನಾಥ್, ರೂಪಕಲಾ ಆಕಾಂಕ್ಷಿ?
ಜಿಲ್ಲೆಯ ಘಟಬಂಧನ್ ನಾಯಕರ ಪ್ರಶ್ನೆಗಳಿಗೆ ಕೋಮುಲ್ ಚುನಾವಣೆಯ ಮಹಿಳಾ ಮೀಸಲು ಕ್ಷೇತ್ರದಲ್ಲಿ ಮಹಾಲಕ್ಷ್ಮಿ ಅವರ ಗೆಲುವೇ ಉತ್ತರವಾಗಿದೆ ಊರುಬಾಗಿಲುಶ್ರೀನಿವಾಸ್ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ
ಬಂಗಾರಪೇಟೆಯ ಎಸ್.ಎನ್.ನಾರಾಯಣಸ್ವಾಮಿ ಕಾಂಗ್ರೆಸ್‌ನ ಹಿರಿಯ ಶಾಸಕರಾಗಿದ್ದು ಅವರು ಕೋಮುಲ್ ಅಧ್ಯಕ್ಷರಾಗಲು ನಮ್ಮ ಅಭ್ಯಂತರವಿಲ್ಲಕೆ.ಜಯದೇವ್ ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ
ಅಧ್ಯಕ್ಷ ಸ್ಥಾನ; ಇಲ್ಲವೇ ಸಚಿವ ಸ್ಥಾನಕ್ಕೆ ಪಟ್ಟು ಕೋಮುಲ್ ಅಧ್ಯಕ್ಷ ಸ್ಥಾನ ಕೊಡಬೇಕು ಇಲ್ಲವೇ ಸಚಿವರನ್ನಾಗಿ ಮಾಡಬೇಕೆಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ರಾಜ್ಯ ವರಿಷ್ಠರ ಬಳಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಭೇಟಿ ವೇಳೆ ಈ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂರು ಬಾರಿ ಶಾಸಕರಾಗಿರುವ ಅವರು ಜಿಲ್ಲೆಯ ಶಾಸಕರಲ್ಲೇ ಹಿರಿಯರು. ಹಿಂದಿನಿಂದಲೂ ಅವರು ಸಚಿವ ಸ್ಥಾನಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಅವರಿಗೆ ನಿಗಮದ ಅಧ್ಯಕ್ಷರನ್ನಾಗಿ ಮಾಡಿ ಸಮಾಧಾನಪಡಿಸಲಾಗಿದೆ. ಘಟಬಂಧನ್ ಮುಖಂಡರನ್ನು ಎದುರು ಹಾಕಿಕೊಂಡಿರುವ ಅವರು ಹಾಲು ಒಕ್ಕೂಟದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ವರಿಷ್ಠರಿಗೆ ಈಗಾಗಲೇ ದೂರು ಕೂಡ ನೀಡಿದ್ದಾರೆ.
ಎಸ್‌ಎನ್‌ಎನ್ ಮಹಾಲಕ್ಷ್ಮಿ ನಮ್ಮವರೇ ‘ಕೋಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಅಭ್ಯರ್ಥಿಗಳು ಗೆದ್ದಿದ್ದಾರೆ. ಹಿಂದೆ ಉತ್ತಮ ಆಡಳಿತ ನೀಡಿದ್ದಕ್ಕೆ ನಮ್ಮನ್ನು ಮತ್ತೆ ಬೆಂಬಲಿಸಿದ್ದಾರೆ. ಮಹಾಲಕ್ಷ್ಮಿ ಕೂಡ ಕಾಂಗ್ರೆಸ್‌ನವರು. ಎಸ್.ಎನ್.ನಾರಾಯಣಸ್ವಾಮಿ ಕೂಡ ಕಾಂಗ್ರೆಸ್‌ನವರೇ. ನಿರ್ದೇಶಕರಾಗಿರುವ ಅವರನ್ನು ಸ್ವಾಗತಿಸುತ್ತೇನೆ. ಕೋಮುಲ್ ಅಧ್ಯಕ್ಷರ ಆಯ್ಕೆ ವಿಚಾರ ಹೈಕಮಾಂಡ್ ಬಿಟ್ಟಿದ್ದು’ ಎಂಬುದಾಗಿ ಶಾಸಕ ಕೆ.ವೈ.ನಂಜೇಗೌಡ ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದರು.
ಮುನಿಯಪ್ಪ ಅಖಾಡ ಪ್ರವೇಶ ಸಾಧ್ಯತೆ ಸಚಿವ ಕೆ.ಎಚ್.ಮುನಿಯಪ್ಪ ಕೂಡ ಅಖಾಡ ಪ್ರವೇಶಿಸುವ ಸಾಧ್ಯತೆ ಇದೆ. ಬೆಂಬಲಿಗರು ಈಗಾಗಲೇ ಅವರಿಗೆ ಕೋಮುಲ್ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆಯ ಬಗ್ಗೆ ವರದಿ ಒಪ್ಪಿಸಿದ್ದಾರೆ. ಈಚೆಗಷ್ಟೇ ಕೋಲಾರದ ಮನೆ ನವೀಕರಣ ಮಾಡಿಸಿರುವ ಅವರು ಜಿಲ್ಲೆಯ ರಾಜಕಾರಣದಲ್ಲಿ ಸಕ್ರಿಯವಾಗುವ ಸುಳಿವು ನೀಡಿದ್ದರು. ‘ರಾಜಕೀಯವಾಗಿ ನಿರಂತರವಾಗಿ ನನ್ನ ಕೈಹಿಡಿದ ಜನರ ರಕ್ಷಣೆ ಮಾಡುವುದು ನನ್ನ ಕರ್ತವ್ಯ. ಅದನ್ನು ಪುನರಾರಂಭಿಸುತ್ತೇನೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.