ADVERTISEMENT

ಷಡ್ಯಂತ್ರಕ್ಕೆ ತಕ್ಕ ಉತ್ತರ ನೀಡಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 14:32 IST
Last Updated 13 ನವೆಂಬರ್ 2021, 14:32 IST
ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಶನಿವಾರ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆ ನಡೆಸಿದರು
ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಕೋಲಾರದಲ್ಲಿ ಶನಿವಾರ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆ ನಡೆಸಿದರು   

ಕೋಲಾರ: ‘ಬ್ಯಾಂಕ್ ವಿರುದ್ಧ ಕೆಲವರು ಷಡ್ಯಂತ್ರ ನಡೆಸುತ್ತಿದ್ದು, ರೈತರು ಹಾಗೂ ಮಹಿಳೆಯರ ಕಷ್ಟಕ್ಕೆ ಸ್ಪಂದಿಸಿ ಪ್ರಾಮಾಣಿಕ ಕೆಲಸದ ಮೂಲಕ ತಕ್ಕ ಉತ್ತರ ನೀಡಿ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸಿಬ್ಬಂದಿಗೆ ತಾಕೀತು ಮಾಡಿದರು.

ಇಲ್ಲಿ ಶನಿವಾರ ನಡೆದ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ರಾಜಕೀಯ ದುರುದ್ದೇಶಕ್ಕೆ ಬ್ಯಾಂಕ್‌ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರ ಪ್ರಯತ್ನಗಳು ಸಫಲವಾಗದು.ಬ್ಯಾಂಕನ್ನು ನಂಬಿರುವ ರೈತರು, ಮಹಿಳೆಯರ ಸೇವೆಯನ್ನು ಬದ್ಧತೆಯಿಂದ ಮಾಡಿ. ಅವರ ಪ್ರೀತಿ, ಆಶೀರ್ವಾದವೇ ನಮಗೆ ಶ್ರೀರಕ್ಷೆ. ರೈತರು ಮತ್ತು ಮಹಿಳಾ ಶಕ್ತಿಯ ಮುಂದೆ ವಿರೋಧಿಗಳ ಷಡ್ಯಂತ್ರ ವಿಫಲವಾಗುತ್ತದೆ’ ಎಂದು ತಿಳಿಸಿದರು.

‘ದಿವಾಳಿಯಾಗಿ ಜನರ ಮನದಿಂದಲೇ ದೂರವಾಗಿದ್ದ ಬ್ಯಾಂಕ್ 7 ವರ್ಷಗಳಿಂದ ಸಾಧಿಸಿರುವ ಪ್ರಗತಿಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದೆ. ಕೆಲವರಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ಗೆ ನಾನು ಮುಖ್ಯವಲ್ಲ. ನಿವೃತ್ತರಾಗುವವರೆಗೂ ಸೇವೆ ಸಲ್ಲಿಸಬೇಕಾದ ಸಿಬ್ಬಂದಿಯೇ ಮುಖ್ಯ. ಬ್ಯಾಂಕ್ ತೊಂದರೆಗೆ ಸಿಲುಕಿದರೆ ಸಿಬ್ಬಂದಿ ಬೀದಿಗೆ ಬರುತ್ತೀರಿ. ಬ್ಯಾಂಕನ್‌ ಘನತೆಗೆ ಕುತ್ತು ತಂದರೆ ಅದು ಇಡೀ ಸಮುದಾಯಕ್ಕೆ ಮಾಡಿದ ದ್ರೋಹ. ಅಂತಹವರನ್ನು ಜನ ಎಂದಿಗೂ ಕ್ಷಮಿಸಲ್ಲ’ ಎಂದು ಹೇಳಿದರು.

ADVERTISEMENT

‘ಸೊಸೈಟಿಗಳ ಗಣಕೀಕರಣ ಅತಿ ಮುಖ್ಯ. ಈ ಕಾರ್ಯ ಶೇ 75ರಷ್ಟು ಮುಗಿದಿದೆ. ಉಳಿದ ಕಾರ್ಯವನ್ನು ಶೀಘ್ರವೇ ಮುಗಿಸಿದರೆ ಪಾರದರ್ಶಕ ಆಡಳಿತದ ಮೂಲಕ ವೃಥಾ ಆರೋಪ ಮಾಡುವವರ ಬಾಯಿಗೆ ಬೀಗ ಹಾಕಬಹುದು.ರೈತರಿಗೆ ಅಗತ್ಯ ಎಲ್ಲಾ ಸಲಕರಣೆಗಳನ್ನು ಒಂದೇ ಸೂರಿನಡಿ ಕಲ್ಪಿಸುವ ರೈತಮಾಲ್ ಸ್ಥಾಪನೆ ಚಿಂತನೆ ಕಾರ್ಯಗತವಾಗಲಿದೆ. ಸೊಸೈಟಿಗಳ ವ್ಯಾಪ್ತಿಯಲ್ಲಿ ವಿವಿಧೋದ್ದೇಶ ಸೇವಾ ಕೇಂದ್ರಗಳ ಸ್ಥಾಪನೆ ಮೂಲಕ ರೈತರು, ಮಹಿಳೆಯರಿಗೆ ನೆರವಾಗೋಣ’ ಎಂದರು.

ಬ್ಯಾಂಕ್‌ನ ನಿರ್ದೇಶಕ ಸೋಮಣ್ಣ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಿವಕುಮಾರ್, ಬೈರೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.