ADVERTISEMENT

ಕಸಾಪ ತ್ರಿಕರಣ ಶುದ್ಧಿ ಸಾಧಿಸಿದೆ

ಸಮ್ಮೇಳನದಲ್ಲಿ ಸಾಹಿತಿ ಕೆ.ಬಿ.ಸಿದ್ದಯ್ಯ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 15:22 IST
Last Updated 17 ಆಗಸ್ಟ್ 2019, 15:22 IST
ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರು ದಲಿತ ಸಾಹಿತ್ಯ ಸಂಪುಟ ಬಿಡುಗಡೆ ಮಾಡಿದರು.
ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರು ದಲಿತ ಸಾಹಿತ್ಯ ಸಂಪುಟ ಬಿಡುಗಡೆ ಮಾಡಿದರು.   

ಕೋಲಾರ: ‘ಕನ್ನಡ ಸಾಹಿತ್ಯ ಪರಿಷತ್ತು ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಬಸವಣ್ಣರ ಹಾದಿಯಲ್ಲಿ ತ್ರಿಕರಣ ಶುದ್ಧಿ ಸಾಧಿಸಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಕಾರ್ಯಗತಗೊಳಿಸಿದೆ’ ಎಂದು ಸಾಹಿತಿ ಕೆ.ಬಿ.ಸಿದ್ದಯ್ಯ ಅಭಿಪ್ರಾಯಪಟ್ಟರು.

ಇಲ್ಲಿ ಶನಿವಾರ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಸಂಪುಟ ಬಿಡುಗಡೆ ಮಾಡಿ ಮಾತನಾಡಿ, ‘ಬುಡಕಟ್ಟು, ಮಹಿಳೆ ಮತ್ತು ದಲಿತರ ವಿಚಾರ ಒಳಗೊಳ್ಳದ ಯಾವುದೇ ಸಮ್ಮೇಳನ ಅರ್ಥಪೂರ್ಣವಾಗದು. ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ದಲಿತ ಸಮ್ಮೇಳನದ ಮೂಲಕ ಬಹಳ ದೊಡ್ಡ ವಿವೇಕ ಬಂದಿದೆ’ ಎಂದು ಅಭಿಪ್ರಾಯಪಟ್ಟರು.

‘ದಲಿತ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಮತ್ತು ಕನ್ನಡ ಚಿಂತನೆಯ ಮೆರುಗು ಹೆಚ್ಚಿಸಿದೆ. ಪರಿಷತ್ತು ಮುಂದಿನ ದಿನಗಳಲ್ಲಿ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸಲಿ. ಆಗ ಮಹಿಳೆಯರು ಮತ್ತು ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಿ’ ಎಂದು ಆಶಿಸಿದರು.

ADVERTISEMENT

‘ಅಕ್ಷರವನ್ನು ದಲಿತರು ಮತ್ತು ಮಹಿಳೆಯರಿಂದ ದೂರ ಇಡಲಾಗಿತ್ತು. ಆದರೆ, ದಲಿತರು ಮತ್ತು ಸ್ತ್ರೀಯರು ಮುಟ್ಟಿದ ನಂತರವಷ್ಟೇ ಅಕ್ಷರಗಳಿಗೆ ಬಿಡುಗಡೆ ಬಂತು. ಅಕ್ಷರಸ್ಥರ ಆಪಾಯಗಳನ್ನು ವಿಮರ್ಶಿಸುವ ಕಾಲಘಟ್ಟ ಇದಾಗಿದೆ. ದಲಿತ ರಾಜಕಾರಣ ಮತ್ತು ಅಕ್ಷರಸ್ಥರ ಅಪಾಯಗಳ ಕುರಿತು ದಲಿತ ಸಾಹಿತ್ಯ ಸಮ್ಮೇಳನ ಮರುಚಿಂತನೆಗೆ ಪ್ರೇರೇಪಿಸಲಿ’ ಎಂದು ಸಲಹೆ ನೀಡಿದರು.

‘ದಲಿತ ಪದಕ್ಕೆ ಜಾತಿಯ ಲೇಪನವಿದ್ದು, ಈ ಪದವು ಸಮಸ್ತ ದುಖಿಃತರನ್ನು ಪ್ರತಿಬಿಂಬಿಸುತ್ತದೆ. ಜಗತ್ತಿನ ಎಲ್ಲಾ ದುಖಿಃತರೂ ದಲಿತರೆಂದು ಪರಿಗಣಿಸಿದರೆ ದಲಿತ ಪದಕ್ಕೆ ಜಾಗತಿಕ ಮಹತ್ವ ಬರುತ್ತದೆ. ಪ್ರಾದೇಶಿಕ ಹಾಗೂ ಜಾತಿಯ ಕಟ್ಟುಪಾಡು ಕಳಚಿಕೊಳ್ಳುತ್ತದೆ’ ಎಂದು ಹೇಳಿದರು.

ಕ್ರಿಯಾಶೀಲವಾಗಿಲ್ಲ: ‘ಜಾತಿ ಮತ್ತು ತಾರತಮ್ಯ ಸಾಮಾಜಿಕ ವ್ಯವಸ್ಥೆಗೆ ಕಾರಣವಾಗಿದ್ದ ವೈದಿಕ ಪರಂಪರೆ ಇಂದು ಕ್ರಿಯಾಶೀಲವಾಗಿಲ್ಲ. ಆದರೆ, ಜಾತಿ ವ್ಯವಸ್ಥೆಯ ಆಧುನೀಕರಣಗೊಂಡು ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯವನ್ನು ಪೋಷಿಸುತ್ತಿದೆ. ಈ ಬಗ್ಗೆ ಸಮ್ಮೇಳನದಲ್ಲಿ ಬೆಳಕು ಚೆಲ್ಲಬೇಕು’ ಎಂದು ಕಿವಿಮಾತು ಹೇಳಿದರು.

ದಲಿತ ಸಾಹಿತ್ಯ ಸಂಪುಟದ ಸಣ್ಣ ಕಥೆಗಳು, ಕಾವ್ಯ, ಜಾನಪದ, ಮಾನವೀಯ ಪ್ರಕಾರ ಸೇರಿದಂತೆ ಐದು ಸಂಪುಟ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.