ADVERTISEMENT

ಗೊಲ್ಲರ ಅಭಿವೃದ್ಧಿ ನಿಗಮ ಮರೀಚಿಕೆ: ಯಾದವಾನಂದ ಸ್ವಾಮೀಜಿ ಅಸಮಾಧಾನ

ಯಾದವ ಸಮುದಾಯದ ಅಭಿವೃದ್ಧಿ ನಿರ್ಲಕ್ಷ್ಯ: ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:55 IST
Last Updated 23 ಸೆಪ್ಟೆಂಬರ್ 2021, 3:55 IST
ಮಾಲೂರು ಪಟ್ಟಣದ ಆದರ್ಶ ನಗರದಲ್ಲಿ ಬುಧವಾರ ತಾಲ್ಲೂಕು ಯಾದವ ಸಂಘದಿಂದ ಹಮ್ಮಿಕೊಂಡಿದ್ದ ಸ್ವಾಮಿಗಳಿಗೆ ಪಾದಪೂಜೆ ಹಾಗೂ ಸಮುದಾಯ ಭವನಕ್ಕೆ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ನಿಧಿ ಸ್ವೀಕರಿಸಿದರು. ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಎ.ವೈ. ಗೋವಿಂದಪ್ಪ, ಹೊಸಕೋಟೆ ಯಾದವ ಸಂಘದ ಅಧ್ಯಕ್ಷ ಪ್ರಸಾದ್‌ ವಿ., ಯಾದವ ಮಹಾಸಭಾ ಅಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ಚನ್ನಪ್ಪ, ಯಾದವ ಸಂಘದ ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿ ಹಾಜರಿದ್ದರು
ಮಾಲೂರು ಪಟ್ಟಣದ ಆದರ್ಶ ನಗರದಲ್ಲಿ ಬುಧವಾರ ತಾಲ್ಲೂಕು ಯಾದವ ಸಂಘದಿಂದ ಹಮ್ಮಿಕೊಂಡಿದ್ದ ಸ್ವಾಮಿಗಳಿಗೆ ಪಾದಪೂಜೆ ಹಾಗೂ ಸಮುದಾಯ ಭವನಕ್ಕೆ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ನಿಧಿ ಸ್ವೀಕರಿಸಿದರು. ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಎ.ವೈ. ಗೋವಿಂದಪ್ಪ, ಹೊಸಕೋಟೆ ಯಾದವ ಸಂಘದ ಅಧ್ಯಕ್ಷ ಪ್ರಸಾದ್‌ ವಿ., ಯಾದವ ಮಹಾಸಭಾ ಅಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ಚನ್ನಪ್ಪ, ಯಾದವ ಸಂಘದ ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿ ಹಾಜರಿದ್ದರು   

ಮಾಲೂರು: ‘ಆಡಳಿತ ನಡೆಸುವ ಸರ್ಕಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ಮತ್ತು ಹಣಕ್ಕೆ ಪ್ರಾಮುಖ್ಯತೆ ಕೊಟ್ಟು ಬೆಳೆದ ಸಮುದಾಯಗಳನ್ನು ಬೆಂಬಲಿಸಿ ತಳ ಸಮುದಾಯಗಳನ್ನು ಕಡೆಗಣಿಸುತ್ತಿವೆ’ ಎಂದು ಯಾದವ ಸಮುದಾಯದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಆದರ್ಶ ನಗರದಲ್ಲಿ ಬುಧವಾರ ತಾಲ್ಲೂಕು ಯಾದವ ಸಂಘದಿಂದ ಹಮ್ಮಿಕೊಂಡಿದ್ದ ಸ್ವಾಮಿಗಳಿಗೆ ಪಾದಪೂಜೆ ಹಾಗೂ ಸಮುದಾಯ ಭವನಕ್ಕೆ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 40 ಲಕ್ಷ ಯಾದವ ಜನಸಂಖ್ಯೆಯಿದೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸರ್ಕಾರದ ವಿರುದ್ಧ ಹಲವು ಬಾರಿ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿಯ ಆಂತರಿಕ ಪರಿಸ್ಥಿತಿಯಲ್ಲಿ ಜಾತಿ ರಾಜಕಾರಣ ಮತ್ತು ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಒಬ್ಬ ಶಾಸಕಿ ರಾಜೀನಾಮೆ ನೀಡಿದರೆ ನಮ್ಮ ಪಕ್ಷಕ್ಕೆ ಏನು ನಷ್ಟವಿಲ್ಲ ಎನ್ನುವ ಬಿಜೆಪಿಯವರ ಮನಸ್ಥಿತಿಯಿಂದ ನಾವು ಸುಮ್ಮನೆ ಇರಬೇಕಾಯಿತು ಎಂದರು.

ADVERTISEMENT

ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಏನಾದರೂ ಅವಕಾಶ ಸಿಗಬಹುದೇ ಎಂದು ಕಾದು ನೋಡಬೇಕಾಗಿದೆ. ರಾಜಕೀಯ ಪಕ್ಷಗಳ ಒಡೆದು ಆಳುವ ನೀತಿಯಿಂದ ಶಿರಾದಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆಲ್ಲಲು ರಾತ್ರೋರಾತ್ರಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು ಎಂದು ಘೋಷಿಸಿದರು. ಇದು ಚುನಾವಣೆ ಸಮಯಕ್ಕೆ ಮಾತ್ರ ಸೀಮಿತವಾಗಿತ್ತು. ನಂತರ ಮಸ್ಕಿಗೆ ಹೋದರು. ಎಲ್ಲಾ ಸಮಗ್ರ ಗೊಲ್ಲರ ಅಭಿವೃದ್ಧಿ ನಿಗಮ ಮಾಡುತ್ತೇವೆ ಎಂದು ಭರವಸೆ ಕೊಟ್ಟರು. ಅದು ಕೂಡ ಈಡೇರಲಿಲ್ಲ ಎಂದು ದೂರಿದರು.

ತಳ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿ ಸಲ್ಲಿಸುವ ಮನವಿಯನ್ನು ಸ್ವೀಕರಿಸುತ್ತಾರೆ. ನಂತರ ಪರಿಸ್ಥಿತಿಯನ್ನು ಯಥಾಪ್ರಕಾರ ಮುಂದುವರಿಸುತ್ತಾರೆ. ಎಲ್ಲಾ ಸಮುದಾಯದ ಮಠಗಳಿಗೆ ಯಡಿಯೂರಪ್ಪ ಅವರ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಅನುದಾನ ನೀಡಿದರು. ಯಾದವ ಸಮುದಾಯಕ್ಕೆ ಸಹ ಅನುದಾನ ಕೊಡುವುದಾಗಿ ಭರವಸೆ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋದರು ಎಂದರು.

ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾದವ ಸಮುದಾಯದ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಒಂದು ವೇಳೆ ಅವರ ಭರವಸೆ ಭರವಸೆಯಾಗಿಯೇ ಉಳಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಾತಿ ಮತ್ತು ಹಣದ ಆಧಾರದ ಮೇಲೆ ರಾಜಕೀಯ ನಡೆಯುತ್ತಿದೆ. ಆರು ವಿಧಾನಸಭಾ ಕ್ಷೇತ್ರಗಳನ್ನು ಈಗಾಗಲೇ ಗುರ್ತಿಸಿದ್ದು, ಪ್ರಬಲರಾದ ವ್ಯಕ್ತಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಲಾಗುತ್ತಿದೆ. ಎಲ್ಲಾ ಜಾತಿಗಳಲ್ಲಿ ಉಪ ಜಾತಿಗಳು ಇರುವಂತೆ ಯಾದವ ಸಮುದಾಯದಲ್ಲಿಯೂ ಉಪ ಜಾತಿಗಳಿವೆ. ಎಲ್ಲರನ್ನೂ ಒಟ್ಟುಗೂಡಿಸಿ ಕೊಂಡು ಹೋಗುವ ಕೆಲಸ ಮಾಡ ಬೇಕಾಗಿದೆ
ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಯಾದವ ಸಮುದಾಯ ಭವನಕ್ಕೆ ಮಾಲೂರು ತಾಲ್ಲೂಕಿನಿಂದ ₹ 6.5 ಲಕ್ಷ ದೇಣಿಗೆ ಸಂಗ್ರಹಿಸಿ ಸ್ವಾಮೀಜಿ ಅವರಿಗೆ ಹಸ್ತಾಂತರಿಸಲಾಯಿತು.

ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಎ.ವೈ. ಗೋವಿಂದಪ್ಪ, ಹೊಸಕೋಟೆ ಯಾದವ ಸಂಘದ ಅಧ್ಯಕ್ಷ ಪ್ರಸಾದ್‌ ವಿ., ಯಾದವ ಮಹಾಸಭಾದ ಅಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ಚನ್ನಪ್ಪ, ಯಾದವ ಸಂಘದ ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ಮಾಲೂರು ತಾಲ್ಲೂಕು ಯಾದವ (ಗೊಲ್ಲ) ಸಂಘದ ಉಪಾಧ್ಯಕ್ಷ ನಟರಾಜ್, ಪ್ರಧಾನ ಕಾರ್ಯದರ್ಶಿ ಸಂಜೀವಪ್ಪ, ನೌಕರರ ಸಂಘದ ಅಧ್ಯಕ್ಷ ಜಯರಾಮಪ್ಪ, ಮಾಜಿ ಅಧ್ಯಕ್ಷ ಚಂದ್ರಶೇಖರ್ ಬಾಬು, ನವೀನ್ ಕುಮಾರ್, ಕರ್ನಾಟಕ ಯಾದವ ಯುವ ವೇದಿಕೆ ರಾಜ್ಯ ಕಾರ್ಯದರ್ಶಿ ಎಂ.ಎನ್. ಮನೋಹರ್ ಯಾದವ್, ಮಾಲೂರು ಘಟಕದ ಜಿ. ರವಿ, ಲೋಕೇಶ್, ಮಾದನಹಟ್ಟಿ ರವಿಕುಮಾರ್, ಪ್ರಸನ್ನ ಕುಮಾರ್, ವೆಂಕಟೇಶ್, ಗಿರೀಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.