ADVERTISEMENT

ತನಿಖೆಗೆ ಸರ್ಕಾರ ಸಿದ್ಧ: ಸಚಿವ ಹೆಬ್ಬಾರ್‌

ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅಕ್ರಮ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 14:40 IST
Last Updated 6 ಜುಲೈ 2020, 14:40 IST
ಶಿವರಾಮ ಹೆಬ್ಬಾರ್
ಶಿವರಾಮ ಹೆಬ್ಬಾರ್   

ಕೋಲಾರ: ‘ಪಿಪಿಇ ಕಿಟ್, ವೆಂಟಿಲೇಟರ್ ಸೇರಿದಂತೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪ್ರತಿಪಕ್ಷಗಳು ಆಗ್ರಹಿಸುವ ಯಾವುದೇ ತನಿಖೆಗೆ ಸರ್ಕಾರ ಸಿದ್ಧವಿದೆ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋವಿಡ್–19 ನಿಯಂತ್ರಣಕ್ಕೆ ಸಂಬಂಧಿಸಿದ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಸಂಬಂಧಪಟ್ಟ ಇಲಾಖೆ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಆದರೂ ಪ್ರತಿಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿವೆ’ ಎಂದು ಟೀಕಿಸಿದರು.

‘32 ಕೋಟಿ ಜನಸಂಖ್ಯೆ ಇರುವ ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ 1.50 ಲಕ್ಷ ಸಾವು ಸಂಭವಿಸಿವೆ. 6ಕೋಟಿ ಜನಸಂಖ್ಯೆ ಇರುವ ಇಟಲಿಯಲ್ಲಿ ಸಾವಿನ ಸಂಖ್ಯೆ 80 ಸಾವಿರ ದಾಟಿದೆ. 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಸಾವಿನ ಸಂಖ್ಯೆ 10 ಸಾವಿರ ಸಹ ದಾಟಿಲ್ಲ. 7 ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕದಲ್ಲಿ ಸಾವಿನ ಸಂಖ್ಯೆ 400ರ ಗಡಿ ದಾಟಿಲ್ಲ’ ಎಂದು ವಿವರಿಸಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೋವಿಡ್‌–19 ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ರಾಜ್ಯದಲ್ಲಿ ಲಾಕ್‌ಡೌನ್‌ ವೇಳೆ ಸಂಕಷ್ಟಕ್ಕೆ ಸಿಲುಕಿದವರಿಗೆ ಕಾರ್ಮಿಕ ಇಲಾಖೆ ಸ್ಪಂದಿಸಿದೆ. ಸುಮಾರು 3 ಲಕ್ಷ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಮತ್ತು ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗಿದೆ. ಬೇರೆ ರಾಜ್ಯಗಳಂತೆ ಕರ್ನಾಟಕದಲ್ಲಿ ಕಾರ್ಮಿಕರ ಸಂಘರ್ಷ ನಡೆದಿಲ್ಲ’ ಎಂದು ತಿಳಿಸಿದರು.

ಕೇಂದ್ರಕ್ಕೆ ಪ್ರಸ್ತಾವ: ‘ಕೆಜಿಎಫ್‌ನ ಇಎಸ್‍ಐ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಬೇಕೆಂದು ವೈದ್ಯರು ಮತ್ತು ಪಕ್ಷದ ಮುಖಂಡರು ಮನವಿ ಮಾಡಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ. ಕೇಂದ್ರ ಸರ್ಕಾರ ಇಎಸ್‍ಐ ಆಸ್ಪತ್ರೆಗಳಿಗೆ ವರ್ಷಕ್ಕೆ ₹ 400 ಕೋಟಿ ಮೌಲ್ಯದ ಔಷಧ ಸರಬರಾಜು ಮಾಡುತ್ತದೆ. ಔಷಧ ಸಮರ್ಪಕವಾಗಿ ಬಳಕೆ ಆಗುತ್ತಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದರು.

‘ರಾಜ್ಯದಲ್ಲಿ ಇಎಸ್‍ಐನ 7 ದೊಡ್ಡ ಆಸ್ಪತ್ರೆಗಳು ಹಾಗೂ 113 ಡಿಸ್ಪೆನ್ಸರಿಗಳು ಇವೆ. ಇಎಸ್‍ಐ ಆಸ್ಪತ್ರೆಗಳಿಗೆ ಅಗತ್ಯವಿರುವ ಸಿ ಮತ್ತು ಡಿ ದರ್ಜೆಯ 278 ಸಿಬ್ಬಂದಿಯನ್ನು ಹೊರ ಗುತ್ತಿಗೆಯಡಿ ಒಂದು ವಾರದಲ್ಲಿ ನೇಮಕ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.