ADVERTISEMENT

ಹಸಿರಿಗೆ ಉಸಿರಾದ ಶಾಲೆ

ಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹಸಿರು ಕ್ರಾಂತಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 11:05 IST
Last Updated 5 ಜೂನ್ 2020, 11:05 IST
ಶಾಲೆಯ ಆವರಣದಲ್ಲಿ ಬೆಳೆಸಿರುವ ಔಷಧಿಯ ಗಿಡಗಳು
ಶಾಲೆಯ ಆವರಣದಲ್ಲಿ ಬೆಳೆಸಿರುವ ಔಷಧಿಯ ಗಿಡಗಳು   

ಮಾಲೂರು: ಶಾಲೆ ಎಂದರೆ ಸಹಜವಾಗಿ ಆಟ ಪಾಠ ಒಂದಿಷ್ಟು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತವಾಗಿರುತ್ತದೆ. ಈ ಪರಧಿಯ ಆಚೆಗೆ ಗುರುತಿಸಿಕೊಂಡ ಶಾಲೆಗಳ ಸಂಖ್ಯೆ ವಿರಳ. ಆದರೆ ತಾಲ್ಲೂಕಿನ ಎಚ್.ಹೊಸಕೋಟೆ ಗ್ರಾ.ಪಂ.ವ್ಯಾಪ್ತಿಯ ಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹಸಿರು ಕ್ರಾಂತಿ ಮೂಲಕ ಜನರ ಗಮನ ಸೆಳೆದಿದೆ.

ಗ್ರಾಮದಲ್ಲಿ 450ಕ್ಕೂ ಹೆಚ್ಚು ಕುಟುಂಬಗಳು ವಾಸವಿದೆ. ಶಾಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿಯವರೆಗೆ 62 ವಿದ್ಯಾರ್ಥಿಗಳಿದ್ದಾರೆ. ಶಾಲೆಯು ಸುಮಾರು ಒಂದು ಎಕರೆ ವಿಸ್ತಾರವಾಗಿದೆ. ಆವರಣದಲ್ಲಿ 450ಕ್ಕೂ ಹೆಚ್ಚು ವಿವಿಧ ಬಗೆಯ ಗಿಡ ಮರಗಳು ಇವೆ.

ಮುಖ್ಯವಾಗಿ ತರಕಾರಿ ಸೊಪ್ಪು ಹಾಗು ವಿವಿಧ ಜಾತಿಯ ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಜತೆಗೆ ಹಾವು ನಂಜು, ಎಕ್ಕದ ಗಿಡ, ಅಲೋವೆರಾ, ಒಂದೆಲಗ, ಅಮೃತ ಬಳ್ಳಿಯಂತಹ ಔಷಧಿಯ ಗುಣವುಳ್ಳ ಗಿಡಗಳನ್ನು ಬೆಳೆಸಲಾಗಿದೆ. ಇಲ್ಲಿ ಬೆಳೆಯುವ ತರಕಾರಿಗಳನ್ನು ಮಕ್ಕಳ ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಗ್ರಾಮ ಪಂಚಾಯತಿಯಿಂದ ಶಾಲಾ ಆವರಣದಲ್ಲಿ ನೀರಿನ ನಲ್ಲಿ ಅಳವಡಿಸಲಾಗಿದೆ. ಈ ನಲ್ಲಿಯಿಂದ ಶಾಲೆಗೆ ಅಗತ್ಯವಿರುವಷ್ಟು ನೀರು ಬಳಸಿಕೊಂಡು ಉಳಿದ ನೀರನ್ನು ದೊಡ್ಡ ತೊಟ್ಟಿಯಲ್ಲಿ ಸಂಗ್ರಹಿಸಲಾಗುತ್ತಿದೆ. ತೊಟ್ಟಿಯಿಂದ ಹನಿ ನೀರಾವರಿ ಪದ್ಧತಿ ಮೂಲಕ ಗಿಡಗಳಿಗೆ ನೀರು ಕೊಡಲಾಗುತ್ತಿದೆ. ಶಾಲೆ ಆವರಣದಲ್ಲಿ ಕಣ್ಣು ಹಾಯಿಸಿದ್ದಲ್ಲೆಲ್ಲಾ ಹಸಿರು ಕಂಗೊಳಿಸುತ್ತಿದೆ.

ADVERTISEMENT

ಶಾಲೆ ಪ್ರವೇಶಿಸುತ್ತಿದ್ದಂತೆ ಹಚ್ಚ ಹಸಿರು ಸ್ವಾಗತಿಸುತ್ತದೆ. ಇಲ್ಲಿನ ಮರಗಳು ಪಕ್ಷಿ ಸಂಕುಲಕ್ಕೆ ಆಶ್ರಯ ತಾಣವಾಗಿದೆ.
ನೀರಿನ ಸಂರಕ್ಷಣೆಗಾಗಿ ಮಳೆ ನೀರುಸಂಗ್ರಹ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಜತೆಗೆ ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ.

ಸುಂದರ ಪರಿಸರ: ಶಾಲೆ ಪ್ರವೇಶಿಸುತ್ತಿದ್ದಂತೆ ಸುಂದರ ಪರಿಸರ ಸ್ವಾಗತಿಸುತ್ತದೆ. ಹನಿ ನೀರಾವರಿ ಪದ್ಧತಿ ಮೂಲಕ ಬೆಳೆದಿರುವ ಸುಮಾರು 61 ವಿವಿಧ ಜಾತಿಯ ಗಿಡ ಮರಗಳನ್ನು ಬೆಳಸಲಾಗಿದೆ. ಶಾಲೆಯ ಆವರಣದಲ್ಲಿ 450 ಗಿಡಮರ
ಗಳನ್ನು ಬೆಳೆಯಲಾಗಿದ್ದು, 58 ಔಷಧಿ ಸಸ್ಯಗಳು, 12 ಬಗೆಯ ಬಳ್ಳಿಗಳು ,4 ಬಗೆಯ ಹುಲ್ಲು, ಹಣ್ಣು ತರಕಾರಿ ಗಿಡಗಳನ್ನು ಬೆಳೆಸಲಾಗಿದೆ. ಗಿಳಿ ಗೊರವಂಕ, ಕೊಗಿಲೆ, ಅಳಿಲುಗಳು ಶಾಲಾ ವಾತಾವರಣಕ್ಕೆ ಸೊಬಗು ತುಂಬಿದೆ. ಪಕ್ಷಿಗಳಿಗೆ ಪ್ರತಿ ದಿನ ಆಹಾರ ನೀರು ಪೂರೈಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.