ADVERTISEMENT

ಕೋಲಾರ: ಹರಿಕಥಾ ವಿದ್ವಾನ್‌ ಜ್ಞಾನಮೂರ್ತಿ ನಿಧನ

ವಚನ, ಪುರಾಣ ಪುಣ್ಯ ಕಥೆ, ಕೀರ್ತನೆ ಮೂಲಕ ಜನರ ಮನಗೆದ್ದಿದ್ದ ವಾಗ್ಮಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 2:37 IST
Last Updated 29 ಜುಲೈ 2025, 2:37 IST
ಎನ್.ಆರ್.ಜ್ಞಾನಮೂರ್ತಿ
ಎನ್.ಆರ್.ಜ್ಞಾನಮೂರ್ತಿ   

ಕೋಲಾರ: ಹೆಸರಾಂತ ಹರಿಕಥಾ ವಿದ್ವಾನ್ ಹಾಗೂ ವಚನಕಾರ ಎನ್.ಆರ್.ಜ್ಞಾನಮೂರ್ತಿ (77) ಅನಾರೋಗ್ಯದಿಂದ ಸೋಮವಾರ ನಿಧನರಾದರು.

ಅವರು ಅವಿವಾಹಿತರಾಗಿದ್ದರು. ಕೋಲಾರ ನಗರದ ಗೌರಿಪೇಟೆಯ ಬಯಲು ಬಸವೇಶ್ವರ ಸ್ವಾಮಿ ದೇವಾಲಯ ಬಳಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಧ್ಯಾಹ್ನ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಸ್ವಗ್ರಾಮ ಕೋಲಾರ ತಾಲ್ಲೂಕಿನ ರಾಮಸಂದ್ರ ಗ್ರಾಮಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸ್ವಗ್ರಾಮದಲ್ಲಿನ ಅವರ ತೋಟದಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಸುಕಿನ 3.30ಕ್ಕೆ ನಿಧನರಾದರು.

ADVERTISEMENT

ಕೋಲಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಜ್ಞಾನಮೂರ್ತಿ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯೋತ್ಸವ, ಕುಮಾರವ್ಯಾಸ, ಕರ್ನಾಟಕ ಕಲಾಶ್ರೀ, ಬಸವಶ್ರೀ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ 27ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಬಸವಣ್ಣನ ವಚನ‌ ವಾಚಿಸುವ ಮೂಲಕ ಪುರಾಣ ಪುಣ್ಯ ಕಥೆಗಳನ್ನು, ಕೀರ್ತನೆಗಳನ್ನು ಹಾಡುವ ಮೂಲಕ ಸಾರ್ವಜನಿಕರ ಮನಗೆದ್ದಿದ್ದರು. ಪ್ರಮುಖ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡುತ್ತಿದ್ದ ಅವರು ಅತ್ಯುತ್ತಮ ವಾಗ್ಮಿಯೂ ಆಗಿದ್ದರು.

ಕರ್ನಾಟಕ ಕೀರ್ತನಾ ಕಲಾ ಪರಿಷತ್ತಿನ ಉಪಾಧ್ಯಕ್ಷರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಅನೇಕ ಗಣ್ಯರು, ಮಠಾಧೀಶರು, ವೀರಶೈವ ಸಮುದಾಯದ ವಿವಿಧ ಸಂಘ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಜ್ಞಾನಮೂರ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಬೆಳ್ಳಾವಿ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ, ನಿವೃತ್ತ ಐಎಎಸ್‌ ಅಧಿಕಾರಿ, ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಸಿ.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್‌ ಪಾಟೀಲ, ಸಹಾಯಕ ನಿರ್ದೇಶಕ ನರೇಂದ್ರ ಬಾಬು, ನಿವೃತ ಅಧಿಕಾರಿ ಬಾವಿಕಟ್ಟಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷ ಬಿ.ಎಂ.ಚನ್ನಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಸುರೇಶ್, ಕಾರ್ಯದರ್ಶಿಗಳಾದ ಅಶೋಕ ಲೋಣಿ, ಕೆಜಿಎಫ್ ಬಸವ ಸಮಿತಿಯ ಉಪಾಧ್ಯಕ್ಷ ಕುಮಾರ್, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ, ಜಿಲ್ಲಾ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಎಸ್‌ಸಿ ಘಟಕದ ಅಧ್ಯಕ್ಷ ಜಯದೇವ್ ಪಾಲ್ಗೊಂಡಿದ್ದರು.

ಸಚಿವ ಕೆ.ಎಚ್‌.ಮುನಿಯಪ್ಪ ಹರಿಕಥಾ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು
ಅಧಿಕಾರಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸ್ವಾಮೀಜಿಗಳು ಮುಖಂಡರು ಹರಿಕಥಾ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.