ADVERTISEMENT

ಹಣ– ಆಸ್ತಿಗಿಂತ ಆರೋಗ್ಯ ಮುಖ್ಯ

ವಾಕ್ ಶ್ರವಣ ತಜ್ಞ ಜಯರಾಮ್ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 12:38 IST
Last Updated 3 ಮಾರ್ಚ್ 2020, 12:38 IST
ದೇವರಾಜ ಅರಸು ಉನ್ನತ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯು ಕೋಲಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾಕ್ ಶ್ರವಣ ದಿನಾಚರಣೆಯಲ್ಲಿ ವಾಕ್ ಶ್ರವಣ ತಜ್ಞ ಡಾ.ಜಯರಾಮ್‌ ಮಾತನಾಡಿದರು.
ದೇವರಾಜ ಅರಸು ಉನ್ನತ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯು ಕೋಲಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾಕ್ ಶ್ರವಣ ದಿನಾಚರಣೆಯಲ್ಲಿ ವಾಕ್ ಶ್ರವಣ ತಜ್ಞ ಡಾ.ಜಯರಾಮ್‌ ಮಾತನಾಡಿದರು.   

ಕೋಲಾರ: ‘ವೈಜ್ಞಾನಿಕ ಚಿಕಿತ್ಸೆಯಿಂದ ವಾಕ್ ಮತ್ತು ಶ್ರವಣ ದೋಷ ನಿವಾರಣೆ ಸಾಧ್ಯ’ ಎಂದು ವಾಕ್ ಶ್ರವಣ ತಜ್ಞ ಡಾ.ಜಯರಾಮ್ ತಿಳಿಸಿದರು.

ದೇವರಾಜ ಅರಸು ಉನ್ನತ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ವಾಕ್ ಶ್ರವಣ ವಿಭಾಗವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾಕ್ ಶ್ರವಣ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ತಕ್ಷಣವೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುವುದು ಸೂಕ್ತ’ ಎಂದು ಸಲಹೆ ನೀಡಿದರು.

‘ವಿಶ್ವ ಸಂಸ್ಥೆಯು ಮಾರ್ಚ್‌ 3ರಂದು ವಾಕ್ ಶ್ರವಣ ದಿನ ಆಚರಿಸಲು ಘೋಷಣೆ ಮಾಡಿದೆ. ವಿಶ್ವ ಸಂಸ್ಥೆ ವರದಿ ಪ್ರಕಾರ ಜಾಗತಿಕವಾಗಿ 46 ಕೋಟಿ ಮಂದಿ ಶ್ರವಣ ದೋಷದಿಂದ ಬಳಲುತ್ತಿದ್ದಾರೆ. 2030ರ ವೇಳೆಗೆ 63 ಕೋಟಿ ಮಂದಿ ಶ್ರವಣ ದೋಷಕ್ಕೆ ತುತ್ತಾಗುತ್ತಾರೆ ಎಂದು ಅಂದಾಜಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಹಣ ಸಂಪಾದನೆ, ಆಸ್ತಿ ಗಳಿಕೆಗಿಂತ ಆರೋಗ್ಯ ಮುಖ್ಯ. ಕೋಟಿಗಟ್ಟಲೇ ಹಣ, ಆಸ್ತಿ ಸಂಪಾದಿಸಿ ಆರೋಗ್ಯವೇ ಸರಿ ಇಲ್ಲದಿದ್ದರೆ ಪ್ರಯೋಜನವಿಲ್ಲ. ಆದ ಕಾರಣ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೂ ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಬೇಕು. ಪೌಷ್ಟಿಕ ಆಹಾರ ಸೇವಿಸಬೇಕು ಮತ್ತು ದುಶ್ಚಟಗಳಿಂದ ದೂರವಿರಬೇಕು’ ಎಂದು ಕಿವಿಮಾತು ಹೇಳಿದರು.

ಯಾಂತ್ರಿಕ ಜೀವನ: ‘ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಮನುಷ್ಯ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾನೆ. ಯಾಂತ್ರಿಕ ಜೀವನದಿಂದ ಮಾನಸಿಕ ಒತ್ತಡ ಹೆಚ್ಚಿ ಜನ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜನರ ಆಹಾರ ಕ್ರಮ ಮತ್ತು ಜೀವನ ಶೈಲಿ ಬದಲಾದರೆ ರೋಗಮುಕ್ತ ಬದುಕು ಸಾಗಿಸಬಹುದು’ ಎಂದು ರಾಜ್ಯ ಸರಕು ಖರೀದಿ ಮತ್ತು ಮಾರಾಟಗಾರರ ಸಹಕಾರ ಸಂಘದ ನಿರ್ದೇಶಕ ವಿ.ಮುನಿರಾಜು ಅಭಿಪ್ರಾಯಪಟ್ಟರು.

‘ಅಂಗವೈಕಲ್ಯ, ವಾಕ್ ಮತ್ತು ಶ್ರವಣ ದೋಷಕ್ಕೆ ವೈದ್ಯಕೀಯ ಪರಿಹಾರವಿದೆ. ಆದರೆ, ಕೆಲವರು ಅರಿವಿನ ಕೊರತೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರ ನಡೆಸಬೇಕು. ಅತಿಯಾಗಿ ಮೊಬೈಲ್ ಬಳಸುವುದರಿಂದ ಶ್ರವಣ ದೋಷ ಎದುರಾಗುವ ಸಾಧ್ಯತೆಯಿದೆ. ಆದ್ದರಿಂದ ಮೊಬೈಲ್ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಬೇಕು’ ಎಂದರು.

ಆರೋಗ್ಯ ಕಾಪಾಡಿಕೊಳ್ಳಿ: ‘ಕಿವಿಯಲ್ಲಿ ಪ್ರಮುಖವಾಗಿ 3 ಭಾಗಗಳಿದ್ದು, ಹೊರ, ಮಧ್ಯ ಮತ್ತು ಒಳ ಕಿವಿಯಿರುತ್ತದೆ. ಒಳ ಕಿವಿಯಿಂದ ಶಬ್ಧವು ನರಗಳ ಮೂಲಕ ಮಿದುಳಿಗೆ ತಲುಪುತ್ತದೆ. ಕೇಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರತಿ ಭಾಗವು ಅದರದೇ ಆದ ನಿರ್ದಿಷ್ಟ ಕಾರ್ಯ ನಿರ್ವಹಿಸುತ್ತವೆ. ಕಿವಿ ಮೇಲೆ ಬಲವಾದ ಏಟು ಬೀಳಬಾರದು. ಜೋರು ಶಬ್ಧದಿಂದ ದೂರವಿರಬೇಕು. ಚೂಪಾದ ವಸ್ತುಗಳನ್ನು ಕಿವಿಯ ನಾಳಕ್ಕೆ ಹಾಕಬಾರದು. ಕಿವಿಯ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಶ್ರವಣ ತಜ್ಞೆ ಡಾ.ಅಪೂರ್ವ ಹೇಳಿದರು.

ವೈದ್ಯ ಡಾ.ಅಭಿಜಿತ್, ದೇವರಾಜ ಅರಸು ಉನ್ನತ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುಮಂತ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.